ಭಾರತಕ್ಕೆ ವೈದ್ಯಕೀಯ ಅಗತ್ಯತೆಗಳನ್ನು ಒದಗಿಸುವುದಾಗಿ ಆಶ್ವಾಸನೆ ನೀಡಿದ ಜೋ ಬೈಡನ್
"ಭಾರತ ನಮಗೆ ಅವಶ್ಯಕತೆಯಿರುವಾಗ ಸಹಾಯ ಮಾಡಿದಂತೆ....''

ವಾಶಿಂಗ್ಟನ್, ಎ. 27: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದು, ದಾಂಧಲೆಗೈಯುತ್ತಿರುವ ಕೊರೋನ ವೈರಸ್ ಪ್ರಕರಣಗಳನ್ನು ನಿಭಾಯಿಸಲು ಭಾರತಕ್ಕೆ ನೆರವು ನೀಡುವುದಾಗಿ ವಾಗ್ದಾನ ಮಾಡಿದ್ದಾರೆ.
ಭಾರತಕ್ಕೆ ನೆರವು ನೀಡಬೇಕೆಂಬ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಭಾರತಕ್ಕೆ ಹಲವು ರೀತಿಯಲ್ಲಿ ನೆರವು ನೀಡಲು ಅಮೆರಿಕ ಸಿದ್ಧವಾಗಿದೆ ಹಾಗೂ ನೆರವನ್ನು ತಲುಪಿಸುವ ಕೆಲಸವನ್ನು ಆರಂಭಿಸಲಾಗಿದೆ ಎಂದು ಉಭಯ ನಾಯಕರ ಟೆಲಿಫೋನ್ ಸಂಭಾಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡ ತಂಡವೊಂದನ್ನು ಅಮೆರಿಕವು ಭಾರತಕ್ಕೆ ಕಳುಹಿಸಲಿದೆ ಎಂದು ಅವರು ಹೇಳಿದರು.
‘‘ಅಮೆರಿಕದ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸುವ ಸಂಸ್ಥೆ ಸಿಡಿಸಿ, ‘ಯುಎಸ್ಏಡ್’ನೊಂದಿಗೆ ವ್ಯವಹರಿಸುತ್ತಿದೆ. ಯುಎಸ್ಏಡ್ ತಕ್ಷಣ ಭಾರತಕ್ಕೆ ಆರೋಗ್ಯ ತಜ್ಞರ ತಂಡವೊಂದನ್ನು ಕಳುಹಿಸಲಿದೆ. ತಂಡದಲ್ಲಿರುವ ಆರೋಗ್ಯ ಪರಿಣತರು ಭಾರತದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಪರಿಣತರೊಂದಿಗೆ ಕೆಲಸ ಮಾಡಲಿದ್ದಾರೆ’’ ಎಂದು ಅಧಿಕಾರಿ ನುಡಿದರು.
ಸೀರಮ್ ಇನ್ಸ್ಟಿಟ್ಯೂಟ್ ಗೆ ಅಮೆರಿಕದ ಕಚ್ಚಾವಸ್ತು
ಭಾರತ ಸರಕಾರದ ಕೋರಿಕೆಯಂತೆ ಅಮೆರಿಕವು ಆ್ಯಸ್ಟ್ರಝೆನೆಕದ ಕೋವಿಶೀಲ್ಡ್ ಲಸಿಕೆ ಉತ್ಪಾದನೆಗಾಗಿ ಕಚ್ಚಾವಸ್ತುಗಳನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಕ್ಕೆ ಕಳುಹಿಸಲಿದೆ.
‘‘ನಮ್ಮ ಸರಕುಗಳನ್ನು ನಾವು ಅವರ ಲಸಿಕೆಗಳ ಉತ್ಪಾದನೆಗಾಗಿ ಸೀರಮ್ ಇನ್ಸ್ಟಿಟ್ಯೂಟ್ಗೆ ಕಳುಹಿಸುತ್ತಿದ್ದೇವೆ. ಭಾರತದಲ್ಲಿನ ಪ್ರಸಕ್ತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಭಾರತಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಈ ಹಂತದಲ್ಲಿ ನಾವು ತೆಗೆದುಕೊಳ್ಳಬಹುದಾದ ಅತ್ಯಂತ ಪರಿಣಾಮಕಾರಿ ಹಾಗೂ ತುರ್ತು ಕ್ರಮವಾಗಿದೆ’’ ಎಂದು ಅಮೆರಿಕದ ಹಿರಿಯ ಅಧಿಕಾರಿ ಹೇಳಿದರು.
6 ಕೋಟಿ ಆ್ಯಸ್ಟ್ರಝೆನೆಕ ಡೋಸ್ಗಳ ಜಾಗತಿಕ ಹಂಚಿಕೆ ಆರಂಭ: ಅವೆುರಿಕ
ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆಯ 6 ಕೋಟಿ ಡೋಸ್ಗಳನ್ನು ಇತರ ದೇಶಗಳಿಗೆ ಹಂಚುವುದನ್ನು ಅಮೆರಿಕ ಆರಂಭಿಸಲಿದೆ ಎಂದು ಶ್ವೇತಭವನದ ಹಿರಿದ ಕೋವಿಡ್-19 ಸಲಹೆಗಾರ ಆ್ಯಂಡಿ ಸ್ಲಾವಿಟ್ ಸೋಮವಾರ ಹೇಳಿದ್ದಾರೆ.
‘‘ಲಸಿಕೆಗಳು ಲಭ್ಯವಾದಂತೆ 6 ಕೋಟಿ ಆ್ಯಸ್ಟ್ರಝೆನೆಕ ಲಸಿಕೆಗಳನ್ನು ಅಮೆರಿಕವು ಇತರ ದೇಶಗಳಿಗೆ ಬಿಡುಗಡೆ ಮಾಡಲಿದೆ’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಫೆಡರಲ್ ಸರಕಾರದ ಸುರಕ್ಷತಾ ಪರಿಶೀಲನೆಯ ಬಳಿಕ, ಮುಂದಿನ ತಿಂಗಳುಗಳಲ್ಲಿ ಕೊರೊನ ವೈರಸ್ ಡೋಸ್ಗಳನ್ನು ಹಂಚಿಕೆ ಮಾಡಲಾಗುವುದು ಎಂಬುದಾಗಿ ಇದಕ್ಕೂ ಮೊದಲು ಅಸೋಸಿಯೇಟಡ್ ಪ್ರೆಸ್ ವರದಿ ಮಾಡಿತ್ತು.