ಅಂಬೇಡ್ಕರ್ ಬಗ್ಗೆ ಅಗೌರವ ತೋರಿದ ಆರೋಪ : ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಪ್ರಕರಣ ದಾಖಲು
ಬ್ರಹ್ಮಾವರ, ಎ.26: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅಗೌರವ ತೋರಿ ಮತ್ತು ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕೆಂಬ ದುರುದ್ದೇಶದಿಂದ ವಾಟ್ಸ್ಆ್ಯಪ್ ಸಂದೇಶಗಳನ್ನು ಕಳುಹಿಸಿರುವ ಆರೋಪದಲ್ಲಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್. ಪ್ರಕಾಶ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಎ.19ರಂದು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎ.23ರಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್ ‘ಪ್ರೌಡ್ ಟು ಬಿ ಬ್ರಾಹ್ಮನ್’ ಎಂಬ ತಲೆಬರಹದ ಅಡಿಯಲ್ಲಿ ‘ಡಾ.ಬಾಬಾ ಸಾಹೇಬರು ಒಬ್ಬರೇ ಸಂವಿಧಾನವನ್ನು ಬರೆದಿಲ್ಲ, ಬೆನಗಲ್ ನರಸಿಂಹ ರಾವ್‌ರವರು ಸಂವಿಧಾನವನ್ನು ಬರೆದಿರುವುದು’ ಎಂಬ ವಿಷಯಗಳನ್ನು ಲಿಖಿತ ರೂಪದಲ್ಲಿ ಚರ್ಚಿಸುತ್ತ ಬ್ರಾಹ್ಮಣರೇ ಶ್ರೇಷ್ಠರು ಎಂದು ಪ್ರತಿಪಾದಿಸಲು ಹೊರಟು ಅಂಬೇಡ್ಕರ್‌ಗೆ ಅಗೌರವವನ್ನು ತೋರಿಸಿದ್ದಾರೆ ಎಂದು ದೂರಲಾಗಿದೆ.
ಈ ನಿಟ್ಟಿನಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿ, ನೂರಾರು ಮಂದಿ ಇರುವ ಬ್ರಹ್ಮಾವರ ಕನ್ನಡ ಭಾಷಾ ಶಿಕ್ಷಕರ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಈ ಸಂದೇಶವನ್ನು ಹರಿಯ ಬಿಟ್ಟು, ಇದನ್ನು ಮತ್ತಷ್ಟು ಹಂಚಿ ಎಂಬುದಾಗಿ ತಿಳಿಸಿದ್ದಾರೆ. ತಾನೊಬ್ಬ ಸರಕಾರಿ ನೌಕರ ಎಂಬ ಕನಿಷ್ಠ ಪ್ರಜ್ಞೆ ಇಲ್ಲದೆ ಅಂಬೇಡ್ಕರ್ ಅವರ ಗೌರವಕ್ಕೆ ಮಸಿ ಬಳಿಯುವ ಹಾಗೂ ಅವರ ಚಾರಿತ್ರ್ಯವನ್ನು ಅವಹೇಳನ ಮಾಡಿ, ತನ್ನ ಮನೋ ವಿಕೃತಿಯನ್ನು ತಮ್ಮ ಬರಹದ ಉದ್ದಕ್ಕೂ ಬ್ರಾಹ್ಮಣರೇ ಶ್ರೇಷ್ಠ ಎಂದು ಪ್ರತಿಪಾದಿಸಿದ್ದಾರೆ. ಇದು ಇಡೀ ಶಿಕ್ಷಕ ಸಮುದಾಯಕ್ಕೆ ತಪ್ಪು ಸಂದೇಶ ವನ್ನು ರವಾನೆ ಮಾಡುವ ಹುನ್ನಾರ ಹೊಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಿಇಒ ಅಮಾನತಿಗೆ ಆಗ್ರಹ
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್.ಪ್ರಕಾಶ್‌ರನ್ನು ಕೂಡಲೇ ಅಮಾನತು ಮಾಡ ಬೇಕು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ. ಅಮಾನತು ಮಾಡದೇ ಹೋದರೆ ದಲಿತ ಸಂಘರ್ಷ ಸಮಿತಿ ತನ್ನ ಹೋರಾಟವನ್ನು ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.







