ದೀಪ್ ಸಿಧುಗೆ ಜಾಮೀನು ನೀಡಿದ ನ್ಯಾಯಾಲಯ; 2ನೇ ಬಂಧನದ ಹಿಂದೆ ದುರುದ್ದೇಶ ಎಂದು ಆಕ್ಷೇಪಿಸಿದ ಕೋರ್ಟ್

ಹೊಸದಿಲ್ಲಿ: ಗಣತಂತ್ರ ದಿನದಂದು ಕೆಂಪು ಕೋಟೆಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳಿಗೆ ಸಂಬಂಧಿಸಿದ ಎರಡನೇ ಪ್ರಕರಣದಲ್ಲಿ ನಟ ದೀಪ್ ಸಿಧುಗೆ ಇಂದು ದಿಲ್ಲಿಯ ನ್ಯಾಯಾಲಯ ಜಾಮೀನು ನೀಡಿದೆ. ಮೊದಲನೇ ಪ್ರಕರಣದಲ್ಲಿ ಜಾಮೀನು ದೊರೆತ ಬೆನ್ನಿಗೇ ಎರಡನೇ ಪ್ರಕರಣದಲ್ಲಿ ಸಿಧುವನ್ನು ಬಂಧಿಸಿದ ಕ್ರಮವನ್ನು ನ್ಯಾಯಾಲಯ ಈ ಸಂದರ್ಭ ಖಂಡಿಸಿದೆ.
ಕೆಂಪು ಕೋಟೆ ಸ್ಮಾರಕಕ್ಕೆ ಹಾನಿಯುಂಟು ಮಾಡಿದ ಪ್ರಕರಣದಲ್ಲಿ ದೀಪ್ ಸಿಧುಗೆ ಇಂದು ರಿಲೀವರ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಾಹಿಲ್ ಗುಪ್ತಾ ಜಾಮೀನು ಮಂಜೂರುಗೊಳಿಸಿದರಲ್ಲದೆ "ಬಂಧನದ ಅಗತ್ಯತೆ ಮತ್ತು ಸಮಯ ಅತ್ಯಂತ ಪ್ರಶ್ನಾರ್ಹ,'' ಎಂದು ಹೇಳಿದ್ದಾರೆ.
ಗಣತಂತ್ರ ದಿನದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಸಿಧು ವಿರುದ್ಧ ಎರಡು ಎಫ್‍ಐಆರ್ ದಾಖಲಾಗಿದ್ದವು. ಮೊದಲನೇ ಎಫ್‍ಐಆರ್‍ಗೆ ಸಂಬಂಧಿಸಿದಂತೆ ಆತನಿಗೆ ಸೆಶನ್ಸ್ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದ ಕೆಲವೇ ಗಂಟೆಗಳಲ್ಲಿ ಕ್ರೈಂ ಬ್ರ್ಯಾಂಚ್ ಆತನನ್ನು ಎರಡನೇ ಪ್ರಕರಣದಲ್ಲಿ ಬಂಧಿಸಿತ್ತು.
ಆರೋಪಿಯು ಫೆಬ್ರವರಿ 9ರಿಂದ ನ್ಯಾಯಾಂಗ ಕಸ್ಟಡಿಯಲ್ಲಿದ್ದಾನೆಂದು ತಿಳಿದಿರುವ ಹೊರತಾಗಿಯೂ ಆತನಿಗೆ ಜಾಮೀನು ದೊರೆತ ದಿನದಂದು ಆತನನ್ನು ಎಪ್ರಿಲ್ 17ರಂದು ಬಂಧಿಸಲಾಗಿತ್ತು, ಜಾಮೀನು ಆದೇಶದ ಉದ್ದೇಶವನ್ನು ವಿಫಲಗೊಳಿಸುವುದು ಇದರ ಉದ್ದೇಶವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.







