ಸೋಮೇಶ್ವರ ಬ್ರಹ್ಮ ಕಲಶೋತ್ಸವಕ್ಕೆ ಎ.ಸಿ.ಮದನ್ ಮೋಹನ್ ದಾಳಿ

ಮಂಗಳೂರು : ಉಳ್ಳಾಲದ ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿಯು ಸರ್ಕಾರದ ಆದೇಶ ಉಲ್ಲಂಘಿಸಿ ಬ್ರಹ್ಮ ಕಲಶೋತ್ಸವ ನಡೆಸುತ್ತಿರುವ ಬಗ್ಗೆ ಆರೋಪಿಸಲಾಗಿದ್ದು, ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದ ಕಂದಾಯ ಇಲಾಖೆ ಮಂಗಳೂರು ಉಪ ವಿಭಾಗದ ಎ.ಸಿ.ಮದನ್ ಮೋಹನ್ ಅವರು ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಸೂಚಿಸಿದ ಬಗ್ಗೆ ವರದಿಯಾಗಿದೆ.
ಸೋಮೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯುತ್ತಿದ್ದು, ಸರ್ಕಾರದ ಆದೇಶ ಪಾಲಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಮಿತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿತ್ತು. ಬಳಿಕ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಸಾವಿರಾರು ಜನರು ಭಾಗಿಯಾಗಿದ್ದರು ಎಂಬ ಆರೋಪದ ಮೇರೆಗೆ ಮುನ್ನೆಚ್ಚರಿಕೆಯಾಗಿ ಮೂರು ದಿನಗಳ ಹಿಂದೆಯೇ ಮಂಗಳೂರು ತಹಶೀಲ್ದಾರ್ ದೇವಸ್ಥಾನಕ್ಕೆ ನೀಡಿದ್ದ ನೋಟೀಸ್ ನ್ನು ಗಣನೆಗೆ ತೆಗೆದುಕೊಳ್ಳದೆ ದೇವಸ್ಥಾನ ಆಡಳಿತ ಸಮಿತಿಯು ಸಾರ್ವಜನಿಕ ಮೆರವಣಿಗೆ ನಡೆಸಿತ್ತು ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ತಹಶೀಲ್ದಾರ್ ಅವರ ದೂರಿನ ಮೇರೆಗೆ ದೇವಸ್ಥಾನ ಆಡಳಿತ ಸಮಿತಿಯ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ, ಐಪಿಸಿ ಸೆಕ್ಷನ್ 269ರಡಿ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಡಳಿತ ಮಂಡಳಿ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮವನ್ನು ಸಮಿತಿಯ ನಿರ್ಧಾರದಂತೆ ಮುಂದುವರಿಸಿತ್ತು. ಆದರೆ ದ.ಕ. ಜಿಲ್ಲೆಯಲ್ಲಿ ಕೋವಿಡ್ ತೀವ್ರಗೊಂಡ ಸಂದರ್ಭದಲ್ಲೂ ಅಪಾರ ಭಕ್ತಾದಿಗಳನ್ನು ಸೇರಿಸಿ ಬ್ರಹ್ಮ ಕಲಶೋತ್ಸವ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದ ಎ.ಸಿ. ಮದನ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸದಂತೆ ಸೂಚಿಸಿದ್ದಾರೆ. ಅಲ್ಲದೇ ಸೇರಿದ್ದ ಜನರನ್ನು ವಾಪಸ್ ತೆರಳುವಂತೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.
ಈ ವೇಳೆ ಸೋಮೇಶ್ವರ ಗ್ರಾಮಕರಣಿಕರಾದ ಲಾವಣ್ಯ, ಮುಖ್ಯಾಧಿಕಾರಿ ವಾಣಿ ಆಳ್ವ ಹಾಗು ಇತರರು ಇದ್ದರು.







