ಪ್ರಯಾಣ ನಿರ್ಬಂಧ ಜಾರಿಗೆ ಮುನ್ನ ಲಕ್ಷಗಟ್ಟಲೆ ವ್ಯಯಿಸಿ ಜೆಟ್ಗಳ ಮೂಲಕ ಬ್ರಿಟನ್ ತಲುಪಿದ ಭಾರತದ ಅಗರ್ಭ ಶ್ರೀಮಂತರು
news18.com ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಕೋವಿಡ್ 2ನೇ ಅಲೆ ವ್ಯಾಪಕವಾಗಿರುವ ಭಾರತವನ್ನು `ಕೆಂಪು ಪಟ್ಟಿ'ಯಲ್ಲಿ ಬ್ರಿಟನ್ ಇರಿಸುವ ಮುನ್ನವೇ ಆ ದೇಶವನ್ನು ತಲಪಲು ಭಾರತದ ಕೆಲ ಅಗರ್ಭ ಶ್ರೀಮಂತರು ಖಾಸಗಿ ಜೆಟ್ಗಳ ಮೂಲಕ ಬ್ರಿಟನ್ ತಲುಪಿದ್ದಾರೆಂಬ ಮಾಹಿತಿಯಿದೆ ಎಂದು news18.com ವರದಿ ಮಾಡಿದೆ.
ಭಾರತದಿಂದ ಆಗಮಿಸುವವರಿಗೆ ಬ್ರಿಟನ್ ಕಳೆದ ಶುಕ್ರವಾರ ನಿರ್ಬಂಧ ಹೇರುವುದಕ್ಕಿಂತ 24 ಗಂಟೆಗಳಿಗೆ ಮುನ್ನ ಸುಮಾರು ಎಂಟು ಖಾಸಗಿ ಜೆಟ್ಗಳು ಲಂಡನ್ನ ಲೂಟೊನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ ಎಂದು ಫ್ಲೈಟ್ ಅವೇರ್ ವೆಬ್ಸೈಟ್ ಮಾಹಿತಿ ನೀಡಿದೆ. ಈ ಚಾರ್ಟರ್ಡ್ ವಿಮಾನ ಸೇವೆಗಳ ದರ ರೂ. 72 ಲಕ್ಷಕ್ಕೂ ಅಧಿಕ ಎಂದು ತಿಳಿದು ಬಂದಿದೆ.
ಈ ಎಂಟು ವಿಮಾನಗಳ ಪೈಕಿ ನಾಲ್ಕು ಮುಂಬೈಯಿಂದ, ಮೂರು ದಿಲ್ಲಿಯಿಂದ ಹಾಗೂ ಒಂದು ಅಹ್ಮದಾಬಾದ್ನಿಂದ ಆಗಮಿಸಿವೆ.
ಕಳೆದ ವಾರ ಭಾರತದಿಂದ ಲಂಡನ್ಗೆ ನೇರ ವಿಮಾನ ಸೇವೆಗಳಲ್ಲಿ ಕೆಲ ಭಾರತೀಯ ಪ್ರಯಾಣಿಕರಿಗೆ ಟಿಕೆಟ್ ದೊರೆತಿರಲಿಲ್ಲವೆಂದೂ ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ಭಾರತದಿಂದ ಕೆಲ ಪ್ರಯಾಣಿಕರಿಗೆ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕಳೆದ ಶುಕ್ರವಾರಕ್ಕಿಂತ ಮುನ್ನ ಹೆಚ್ಚುವರಿ ವಿಮಾನಗಳ ಹಾರಾಟಕ್ಕೆ ಕೆಲ ವಿಮಾನಯಾನ ಸಂಸ್ಥೆಗಳು ಮನವಿ ಮಾಡಿದ್ದರೂ ಅನುಮತಿ ದೊರೆತಿರಲಿಲ್ಲ.
ಭಾರತದಲ್ಲಿ ಕಂಡು ಬಂದಿರುವ ಡಬಲ್ ಮ್ಯುಟೆಂಟ್ ಕೋವಿಡ್ ಪ್ರಬೇಧದ 55 ಪ್ರಕರಣಗಳು ಇಂಗ್ಲೆಂಡ್ನಲ್ಲಿ ದೃಢಗೊಂಡ ನಂತರ ಇಂಗ್ಲೆಂಡ್ ಪ್ರಯಾಣ ನಿರ್ಬಂಧ ವಿಧಿಸಿದೆ.







