ಆಕ್ಸಿಜನ್ ಕೊರತೆ ಬಗ್ಗೆ ದಿಲ್ಲಿ ಸರಕಾರ ನಮ್ಮ ಕರೆಗೆ ಸ್ಪಂದಿಸಿಲ್ಲ: ಹೈಕೋರ್ಟ್‍ಗೆ ತಿಳಿಸಿದ ಜೈಪುರ ಗೋಲ್ಡನ್ ಆಸ್ಪತ್ರೆ
ಆಕ್ಸಿಜನ್ ಇಲ್ಲದೆ 25 ರೋಗಿಗಳು ಮೃತಪಟ್ಟಿದ್ದ ಪ್ರಕರಣ

ಹೊಸದಿಲ್ಲಿ: ಆಸ್ಪತ್ರೆಯು ಆಕ್ಸಿಜನ್ ಗಾಗಿ ತುರ್ತು ಕರೆ ಮಾಡಿದಾಗ ಕೇಜ್ರಿವಾಲ್ ಸರಕಾರ ನಿರ್ಲಕ್ಷ್ಯ ತೋರಿದೆ ಎಂದು ಕಳೆದ ವಾರ ಆಕ್ಸಿಜನ್ ಕೊರತೆಯಿಂದಾಗಿ 25 ರೋಗಿಗಳು ಮೃತಪಟ್ಟಿರುವ ದಿಲ್ಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯು ದಿಲ್ಲಿ ಹೈಕೋರ್ಟ್‍ಗೆ ತಿಳಿಸಿದೆ.
ಜೈಪುರ ಗೋಲ್ಡನ್ ಆಸ್ಪತ್ರೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಚಿನ್ ದತ್ತ, ನಾವು ಹಲವು ಬಾರಿ ತುರ್ತು ಕರೆ ಮಾಡಿದ್ದೆವು. ಆದರೆ ದಿಲ್ಲಿ ಸರಕಾರ ಏನೂ ಪ್ರತಿಕ್ರಿಯೆ ನೀಡಲಿಲ್ಲ. ಸಾವು ಸಂಭವಿಸಲು ಎಷ್ಟು ಗಂಟೆಗಳ ಮೊದಲು ನಾವು ಅವರಿಗೆ ಕರೆ ಮಾಡಬೇಕೆಂದು ದಯವಿಟ್ಟು ತಿಳಿಸಿ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ದತ್ತಾ ತಿಳಿಸಿದರು.
ನಾವು ಸಂಜೆ 5 ಗಂಟೆಗೆ 3.6 ಮೆಟ್ರಿಕ್ ಟನ್ ಆಕ್ಸಿಜನ್ ಪಡೆಯಬೇಕಿತ್ತು. ಆದರೆ ಅದು ಸಿಗಲಿಲ್ಲ. ದಿಲ್ಲಿ ಸರಕಾರದ ಅಧಿಕಾರಶಾಹಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅವರು ಪೂರೈಕೆ ಸರಪಳಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಆಸ್ಪತ್ರೆಯ ಪರ ವಕೀಲರು ಹೇಳಿದರು.
ದತ್ತಾ ಅವರು ಎಲ್ಲವನ್ನೂ ರಾಜಕೀಯಗೊಳಿಸಲು ಹಾಗೂ ಉದ್ದೇಶಪೂರ್ವಕವಾಗಿ ನಮಗೆ ಮಾರಕವಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಸರಕಾರವನ್ನು ಪ್ರತಿನಿಧಿಸಿದ ವಕೀಲ ರಾಹುಲ್ ಮೆಹ್ರಾ ಹೇಳಿದರು.
ದತ್ತಾ ಅವರ ಆಕ್ರೋಶ ನಮಗೆ ಅರ್ಥವಾಗುತ್ತದೆ. ದಿಲ್ಲಿ ಸರಕಾರವು ಉಪಕ್ರಮಗಳನ್ನುತೆಗೆದುಕೊಳ್ಳಬೇಕಿತ್ತು ಹಾಗೂ ಆಸ್ಪತ್ರೆಗಳೊಂದಿಗೆ ವರ್ಚುವಲ್ ಸಭೆಗಳನ್ನು ನಡೆಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.