ಲಸಿಕೆ ಪಡೆದ 10 ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು : ಕಮಿಷನರ್ ಶಶಿಕುಮಾರ್

ಕಮಿಷನರ್ ಶಶಿಕುಮಾರ್
ಮಂಗಳೂರು, ಎ.26: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅವರಲ್ಲಿ ಇಬ್ಬರಲ್ಲಿ ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೋಂ ಐಸೋಲೇಶನ್ನಲ್ಲಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
10 ಮಂದಿಯೂ ಕೊರೋನ ಲಸಿಕೆಯ ಪ್ರಥಮ ಡೋಸ್ ಪಡೆದಿದ್ದು, ಆರು ಮಂದಿ ಎರಡನೆ ಡೋಸನ್ನು ಪಡೆದಿದ್ದಾರೆ. ಅವರೆಲ್ಲರೂ ಸದ್ಯ ಉತ್ತಮವಾಗಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂ, ಆಯಾ ಪೊಲೀಸ್ ಠಾಣೆಗಳ ಮೂಲಕ ಸೋಂಕಿತರು ಹಾಗೂ ಅವರ ಮನೆಯವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಮಂಗಳೂರು ಕಾರಾಗೃಹ ಕೈದಿಗಳ ಹೊಡೆದಾಟ: 20 ಮಂದಿಯ ಸ್ಥಳಾಂತರ
ನಗರದ ಕೊಡಿಯಾಲ್ಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ 20 ಮಂದಿ ಯನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜೈಲ್ ಸುಪರಿಂಟೆಂಡ್ ಮಾಹಿತಿ ನೀಡಿದ್ದಾರೆ.
ಜೈಲಿನಲ್ಲಿ ಸಹಚರರು ಹಾಗೂ ಜೈಲು ಸಿಬ್ಬಂದಿ ಮೇಲಿನ ಹಲ್ಲೆಗೆ ಸಂಬಂಧಿಸಿ ಐದು ಪ್ರಕರಣಗಳು ದಾಖಲಾಗಿದೆ ಎಂದು ಅವರು ಹೇಳಿದರು. ಪ್ರಕರಣದ ಓರ್ವ ಆರೋಪಿ ಸಮೀರ್ ಎಂಬಾತನ ಮೇಲೆ 10ಕ್ಕೂ ಅಧಿಕ ಪ್ರಕರಣಗಳಿದ್ದು, ಅನ್ಸಾರ್ ಮೇಲೂ ಹಲವು ಪ್ರಕರಣಗಳಿವೆ. ಈ ಆರೋಪಿಗಳು ಜೈಲಿನಲ್ಲಿ ಲಭ್ಯ ಇರುವ ವಸ್ತುಗಳನ್ನೇ ಉಪಯೋಗಿಸಿ ಅದನ್ನು ಮಾರಕಾಯುಧವನ್ನಾಗಿ ಮಾರ್ಪಡಿಸಿಕೊಂಡಿದ್ದರು. ಕ್ಯಾರಂ ಬೋರ್ಡ್ನ ಫ್ರೇಂ ಅನ್ನು ತುಂಡು ಮಾಡಿ ಅದನ್ನು ಹರಿತವಾದ ಚೂರಿಯಾಗಿಸಿಕೊಂಡಿದ್ದಾರೆ. ಟ್ಯೂಬ್ಲೈಟ್ನ್ನು ತುಂಡು ಮಾಡಿ ಅದರ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ ಶಸ್ತ್ರಾಸ್ತ್ರವನ್ನಾಗಿಯೂ ಈ ಕೈದಿಗಳು ಉಪಯೋಗಿಸಿದ್ದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದರು.







