ಉಡುಪಿಯಲ್ಲಿ ಕೋವಿಡ್ ಲಸಿಕೆಗೆ ಕೊರತೆ: ಜಿಲ್ಲಾ ಆರೋಗ್ಯಧಿಕಾರಿ ಡಾ.ಸುಧೀರ್‌ಚಂದ್ರ ಸೂಡ
ಉಡುಪಿ, ಎ.26: ಕೋವಿಡ್ ಎರಡನೇ ಅಲೆ ಜಿಲ್ಲೆಯಲ್ಲೂ ನಿರೀಕ್ಷೆ ಮೀರಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನರೂ ಕೋವಿಡ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳ ಮುಂದೆ ಕ್ಯೂ ನಿಲ್ಲುತಿದ್ದು, ಆದರೆ ಲಸಿಕೆಯ ಕೊರತೆಯಿಂದ ನಿರಾಶರಾಗಿ ಹಿಂದಿರುಗುತ್ತಿರುವ ವರದಿಗಳು ಜಿಲ್ಲೆಯಿಂದ ಬಂದಿವೆ.
ಕೆಲವು ದಿನಗಳಿಂದ ಲಸಿಕೆ ಲಭ್ಯತೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಿದ್ದರಿಂದ ಸ್ಪಲ್ಪ ತೊಂದರೆಯಾಗಿರುವುದು ನಿಜ. ಲಸಿಕೆ ಬಂದಂತೆ ನಾವು ಹಂಚಿ ನೀಡುತಿದ್ದು, ಶನಿವಾರ ಬಂದ ಲಸಿಕೆಯನ್ನು ಹಂಚಲಾಗಿದೆ. ಇಂದು ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬಂದ ಜನರು ಸಿಗದೇ ಮರಳಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಆದರೆ ನಾಳೆ ಪರಿಸ್ಥಿತಿ ಸುಧಾರಿಸಲಿದೆ. ನಾಳೆ ಅಪರಾಹ್ನದೊಳಗೆ 20,000 ಡೋಸ್‌ನಷ್ಟು ಲಸಿಕೆ ಬರಲಿದ್ದು, ಕೆಲವು ದಿನ ಬಂದವರಿಗೆಲ್ಲಾ ನೀಡಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು. ಇಂದು ಜಿಲ್ಲಾಸ್ಪತ್ರೆಯಲ್ಲಿ 229 ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.





