ಕುಂಬಳೆ: ನದಿಯಲ್ಲಿ ಮುಳುಗಿ ಮೂವರು ಯುವಕರು ಮೃತ್ಯು

ಸಾಂದರ್ಭಿಕ ಚಿತ್ರ
ಕುಂಬಳೆ, ಎ.26: ನದಿಯಲ್ಲಿ ಸ್ನಾನಕ್ಕಿಳಿದ ಬಾಲಕನೊಬ್ಬನ ಸಹಿತ ಮೂವರು ಮೃತಪಟ್ಟ ಘಟನೆ ಸೋಮವಾರ ಸಂಜೆ ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ನಡೆದಿದೆ.
ದ.ಕ. ಜಿಲ್ಲೆಯ ಪುತ್ತೂರು ನಿವಾಸಿಗಳಾದ ಕೀರ್ತನ್(19), ಕಾರ್ತಿಕ್(18) ಮತ್ತು ನಿರಂಜನ್(15) ಮೃತಪಟ್ಟವರಾಗಿದ್ದಾರೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಶಿರಿಯ ನದಿಯ ಆರಿಕ್ಕಾಡಿಯಲ್ಲಿ ಈ ದುರ್ಘಟನೆ ನಡೆದಿದೆ.
ಒಟ್ಟು 13 ಮಂದಿ ನದಿ ಬದಿಗೆ ಬಂದಿದ್ದು, ಈ ಪೈಕಿ ಮೂವರು ಸ್ನಾನಕ್ಕಿಳಿದ ಸಂದರ್ಭದಲ್ಲಿ ಮುಳುಗಿದ್ದಾರೆ. ಓರ್ವ ಮುಳುಗುವುದನ್ನು ಕಂಡ ಇತರ ಇಬ್ಬರು ರಕ್ಷಿಸಲೆತ್ನಿಸಿದಾಗ ಮೂವರು ಮುಳುಗಿದ್ದಾರೆನ್ನಲಾಗಿದೆ.
ಜೊತೆಗಿದ್ದವರ ಬೊಬ್ಬೆ ಕೇಳಿ ಸ್ಥಳೀಯರು ಹಾಗೂ ಮೀನುಗಾರರು ಮತ್ತು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದರು. ಈ ವೇಳೆ ನಾಪತ್ತೆಯಾಗಿದ್ದ ನಿರಂಜನ್ರ ಮೃತದೇಹ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ರಾತ್ರಿಯ ವೇಳೆ ಸ್ಥಳೀಯರು ಪತ್ತೆಹಚ್ಚಿ ಮೇಲೆತ್ತಿದ್ದಾರೆ. ಈ ಮೂವರು ಕುಂಬಳೆಯಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದರು ಎನ್ನಲಾಗಿದೆ. ಈ ವೇಳೆ ನದಿಯಲ್ಲಿ ಸ್ನಾನಕ್ಕಿಳಿದಾಗ ಈ ದುರಂತ ಸಂಭವಿಸಿದೆ.
ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







