ಕೋವಿಡ್-19 ಎದುರಿಸಲು ರಕ್ಷಣಾ ಪಡೆಗಳ ಸನ್ನದ್ಧತೆಗಳನ್ನು ಪರಿಶೀಲಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ,ಎ.26: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಶಸ್ತ್ರಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರನ್ನು ಭೇಟಿಯಾಗಿ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸಲು ರಕ್ಷಣಾ ಪಡೆಗಳು ಮಾಡಿಕೊಂಡಿರುವ ಸಿದ್ಧತೆಗಳು ಮತ್ತು ಕಾರ್ಯಾಚರಣೆಗಳನ್ನು ಪರಿಶೀಲಿಸಿದರು.
ನಿವೃತ್ತರಾಗಿರುವ ಅಥವಾ ಸ್ವಯಂ ನಿವೃತ್ತಿ ಪಡೆದಿರುವ ಸಶಸ್ತ್ರ ಪಡೆಗಳ ಎಲ್ಲ ವೈದ್ಯಕೀಯ ವೃತ್ತಿಪರರನ್ನು ತಮ್ಮ ವಾಸಸ್ಥಳದ ಸಮೀಪದ ಕೋವಿಡ್-19 ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡಲು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಈ ಹಿಂದೆ ನಿವೃತ್ತರಾಗಿರುವ ಇತರ ವೈದ್ಯಾಧಿಕಾರಿಗಳನ್ನು ವೈದ್ಯಕೀಯ ತುರ್ತು ಸಹಾಯವಾಣಿಗಳ ಮೂಲಕ ಸಮಾಲೋಚನೆಗೆ ಲಭ್ಯರಿರುವಂತೆ ಕೋರಿಕೊಳ್ಳಲಾಗಿದೆ ಎಂದು ಜ.ರಾವತ್ ಪ್ರಧಾನಿಯವರಿಗೆ ಮಾಹಿತಿ ನೀಡಿದ್ದಾಗಿ ಅಧಿಕೃತ ಹೇಳಿಕೆಯು ತಿಳಿಸಿದೆ.
ಭೂಸೇನೆ,ನೌಕಾಪಡೆ ಮತ್ತು ವಾಯುಪಡೆಗಳ ವಿವಿಧ ಕೇಂದ್ರ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವೈದ್ಯಾಧಿಕಾರಿಗಳನ್ನು ಆಸ್ಪತ್ರೆಗಳಲ್ಲಿ ನಿಯೋಜಿಸಲಾಗುವುದು ಎಂದೂ ಮೋದಿಯವರಿಗೆ ಮಾಹಿತಿ ನೀಡಲಾಗಿದೆ.
ಆಸ್ಪತ್ರೆಗಳಲ್ಲಿ ವೈದ್ಯರಿಗೆ ನೆರವಾಗಲು ದೊಡ್ಡಸಂಖ್ಯೆಯಲ್ಲಿ ನರ್ಸಿಂಗ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಮತ್ತು ಸಶಸ್ತ್ರ ಪಡೆಗಳಲ್ಲಿ ಲಭ್ಯವಿರುವ ಆಮ್ಲಜನಕದ ಸಿಲಿಂಡರ್‌ಗಳನ್ನು ಆಸ್ಪತ್ರೆಗಳಿಗೆ ಬಿಡುಗಡೆಗೊಳಿಸಲಾಗುವುದು ಎಂದು ಜ.ರಾವತ್ ಅವರು ಪ್ರಧಾನಿಯವರಿಗೆ ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು,ಅಲ್ಲಿ ಸಾಧ್ಯವಿರುವ ಮಿಲಿಟರಿ ವೈದ್ಯಕೀಯ ಮೂಲಸೌಕರ್ಯಗಳನ್ನು ನಾಗರಿಕರಿಗೆ ಲಭ್ಯವಾಗಿಸಲಾಗುವುದು ಎಂದೂ ಅವರು ಮಾಹಿತಿ ನೀಡಿದರು.
ಆಮ್ಲಜನಕ ಮತ್ತು ಇತರ ಅಗತ್ಯ ವಸ್ತುಗಳ ಸಾಗಾಣಿಕೆಗಾಗಿ ಭಾರತಿಯ ವಾಯುಪಡೆಯು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಕೈಗೊಂಡಿರುವ ಕಾರ್ಯಾಚರಣೆಗಳನ್ನೂ ಮೋದಿ ಪುನರ್‌ಪರಿಶೀಲಿಸಿದರು.
ದುರ್ಗಮ ಪ್ರದೇಶಗಳು ಸೇರಿದಂತೆ ಗರಿಷ್ಠ ವ್ಯಾಪ್ತಿಗಳಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಾಜಿ ಯೋಧರ ಸೇವೆಗಳನ್ನು ಪಡೆದುಕೊಳ್ಳ್ಳುವಂತೆ ಕೇಂದ್ರೀಯ ಮತ್ತು ರಾಜ್ಯ ಸೈನಿಕ ಕಲ್ಯಾಣ ಮಂಡಳಿಗಳಿಗೆ ಸೂಚಿಸಬಹುದಾಗಿದೆ ಎಂದು ಮೋದಿ ಜ.ರಾವತ್ ಅವರಿಗೆ ತಿಳಿಸಿದರು.