ಹೃದಯ ಛಿದ್ರಗೊಂಡಿದೆ:ಕೋವಿಡ್ ವಿರುದ್ಧ ಭಾರತದ ಸಮರಕ್ಕೆ ಬೆಂಬಲ ಘೋಷಿಸಿದ ಸತ್ಯ ನಾದೆಲ್ಲ, ಸುಂದರ ಪಿಚೈ

ಹೊಸದಿಲ್ಲಿ,ಎ.26: ಜಾಗತಿಕ ದೈತ್ಯ ಟೆಕ್ ಕಂಪನಿಗಳಾದ ಮೈಕ್ರೋಸಾಫ್ಟ್ ಮತ್ತು ಗೂಗಲ್‌ಗಳ ಸಿಇಒಗಳಾದ ಸತ್ಯ ನಾದೆಲ್ಲ ಮತ್ತು ಸುಂದರ ಪಿಚೈ ಅವರು ರೋಗಿಗಳಿಂದ ತುಂಬಿರುವ ಆಸ್ಪತ್ರೆಗಳು ಮತ್ತು ಪೂರೈಕೆಗಳ ಕೊರತೆಗಳ ನಡುವೆಯೇ ಕೋವಿಡ್-19 ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಸೋಮವಾರ ನೆರವಿನ ಭರವಸೆಯನ್ನು ಘೋಷಿಸಿದ್ದಾರೆ.
ವೈದ್ಯಕೀಯ ಪೂರೈಕೆಗಳು,ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳನ್ನು ಬೆಂಬಲಿಸಲು ಮತ್ತು ಮಾರಣಾಂತಿಕ ವೈರಸ್‌ನ ಕುರಿತು ಮಹತ್ವದ ಮಾಹಿತಿಗಳನ್ನು ಹರಡಲು ನೆರವಾಗುವ ನಿಟ್ಟಿನಲ್ಲಿ ಗೂಗಲ್ ಯುನಿಸೆಫ್ ಮತ್ತು ಲಾಭರಹಿತ ಸಂಸ್ಥೆ ಗಿವ್ ಇಂಡಿಯಾಕ್ಕೆ 135 ಕೋ.ರೂ.ಗಳನ್ನು ಒದಗಿಸಲಿದೆ ಎಂದು ಪಿಚೈ ಟ್ವೀಟಿಸಿದ್ದಾರೆ.
ಭಾರತದಲ್ಲಿಯ ತೀವ್ರ ಕೋವಿಡ್ ಬಿಕ್ಕಟ್ಟಿನ ಸ್ಥಿತಿಯನ್ನು ಕಂಡು ಹತಾಶನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿಯ ಹಾಲಿ ಕೋವಿಡ್-19 ಸ್ಥಿತಿಯು ತನ್ನ ಹೃದಯವನ್ನು ಛಿದ್ರಗೊಳಿಸಿದೆ ಎಂದಿರುವ ನಾದೆಲ್ಲ,ತನ್ನ ಕಂಪನಿಯು ಪರಿಹಾರ ಪ್ರಯತ್ನಗಳಿಗೆ ಮತ್ತು ಆಮ್ಲಜನಕ ಸಾಂದ್ರೀಕರಣ ಸಾಧನಗಳ ಖರೀದಿಯನ್ನು ಬೆಂಬಲಿಸಲು ತನ್ನ ಸಂಪನ್ಮೂಲಗಳು ಮತ್ತು ತಂತ್ರಜ್ಞಾನ ಬಳಕೆಯನ್ನು ಮಂದುವರಿಸಲಿದೆ ಎಂದಿದ್ದಾರೆ.
ನಾದೆಲ್ಲ ತನ್ನ ಟ್ವೀಟ್‌ನಲ್ಲಿ ಭಾರತಕ್ಕೆ ನೆರವಿನ ಭರವಸೆಯನ್ನು ನೀಡಿರುವ ಅಮೆರಿಕಕ್ಕೆ ಕೃತಜ್ಞತೆಗಳನ್ನೂ ಸಲ್ಲಿಸಿದ್ದಾರೆ.
ಹಲವಾರು ಗಣ್ಯರು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಭಾರತದೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಹಲವಾರು ದೇಶಗಳು ಭಾರತಕ್ಕೆ ಅಗತ್ಯ ನೆರವನ್ನು ಒದಗಿಸಲು ಮುಂದೆ ಬಂದಿವೆ.
ಅಗತ್ಯ ವೈದ್ಯಕೀಯ ಜೀವರಕ್ಷಕ ಪೂರೈಕೆಗಳು ಮತ್ತು ಉಪಕರಣಗಳ ತುರ್ತು ರವಾನೆ ಸೇರಿದಂತೆ ಭಾರತಕ್ಕೆ ಎಲ್ಲ ನೆರವನ್ನು ಒದಗಿಸುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಭರವಸೆ ನೀಡಿದ್ದಾರೆ.
ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಸಾಂದ್ರೀಕರಣ ಸಾಧನಗಳು ಸೇರಿದಂತೆ ಜೀವರಕ್ಷಕ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸುವುದಾಗಿ ಬ್ರಿಟನ್ ಕೂಡ ಭರವಸೆ ನೀಡಿದೆ.
ಭಾರತದಲ್ಲಿ ಇಂದು ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದೈನಂದಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚುಕಡಿಮೆ ಜಗತ್ತಿನಲ್ಲಿಯ ಎಲ್ಲ ಹೊಸ ಪ್ರಕರಣಗಳ ಪೈಕಿ ಅರ್ಧದಷ್ಟು ಇಲ್ಲಿ ದಾಖಲಾಗುತ್ತಿವೆ.