ಆಮ್ಲಜನಕ ಸಾಕಷ್ಟಿದೆ, ಸಾಗಾಣಿಕೆಯೇ ಸಮಸ್ಯೆ: ಸರಕಾರ

ಹೊಸದಿಲ್ಲಿ, ಎ.26: ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ದಾಸ್ತಾನು ಇದೆ, ಜನರು ಭಯ ಪಡಬೇಕಿಲ್ಲ. ಆದರೆ ಆಮ್ಲಜನಕದ ಸಾಗಾಣಿಕೆಯೇ ಸಮಸ್ಯೆಯಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.
ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ದಾಸ್ತಾನು ಇದೆ. ಆದರೆ ಸಾಗಾಣಿಕೆಯ ಸಮಸ್ಯೆಯಿದ್ದು ಇದನ್ನು ಸಂಬಂಧಪಟ್ಟ ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಗೃಹ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪಿಯೂಷ್ ಗೋಯಲ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಆಮ್ಲಜನಕದ ವಿಷಯದಲ್ಲಿ ಗಾಬರಿ ಪಡುವ ಅಗತ್ಯವೇ ಇಲ್ಲ. ಆಮ್ಲಜನಕ ಉತ್ಪಾದಿಸುವ ರಾಜ್ಯದಿಂದ ಅತ್ಯಧಿಕ ಬೇಡಿಕೆ ಇರುವ ರಾಜ್ಯಕ್ಕೆ ಸಾಗಾಟ ಮಾಡುವ ಸಮಸ್ಯೆ ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ವಿದೇಶದಿಂದ ಆಮ್ಲಜನಕದ ಟ್ಯಾಂಕರ್‌ಗಳನ್ನು ಖರೀದಿಸಲು ಅಥವಾ ಬಾಡಿಗೆ ಪಡೆಯಲು ಆರ್ಡರ್ ಸಲ್ಲಿಸಲಾಗಿದೆ. ಆದರೆ ಆಮ್ಲಜನಕದ ಟ್ಯಾಂಕರ್‌ಗಳ ಸಾಗಾಣಿಕೆ ಪ್ರಮುಖ ಸಮಸ್ಯೆಯಾಗಿದೆ. ‘ರಿಯಲ್ ಟೈಮ್ ಟ್ರಾಕಿಂಗ್’ ವ್ಯವಸ್ಥೆಯ ಮೂಲಕ ಆಮ್ಲಜನಕ ಟ್ಯಾಂಕರ್‌ಗಳ ಸಂಚಾರದ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಗೋಯಲ್ ಹೇಳಿದ್ದಾರೆ.
ಸೋಂಕಿನ ಪ್ರಸರಣ ಸರಪಳಿಯನ್ನು ಮುರಿಯಲು ನಿರ್ಧಿಷ್ಟ ಜಿಲ್ಲೆ ಮತ್ತು ಪ್ರದೇಶಗಳಲ್ಲಿ ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸುವ ಪ್ರಕ್ರಿಯೆಯ ಬಗ್ಗೆ ಗಮನ ಹರಿಸುವಂತೆ ಗೃಹ ಇಲಾಖೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ನಿರ್ಬಂಧ ಜಾರಿಗೊಳಿಸುವ ವಿಷಯದಲ್ಲಿ ಜಿಲ್ಲಾಡಳಿತ ಸಂವೇದನಾಶೀಲತೆ ಹೊಂದಿರಬೇಕು ಮತ್ತು ಇದು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಸಾರ್ವಜನಿಕರಿಗೆ ಮತ್ತು ಕ್ಷೇತ್ರ ಕಾರ್ಯನಿರ್ವಾಹಕರಿಗೆ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಗೃಹ ಇಲಾಖೆ ಹೇಳಿದೆ.
ದೇಶದಲ್ಲಿ ಕೊರೋನ ಸೋಂಕಿನ ತೀವ್ರತೆ ಮುಂದುವರಿದಿದ್ದು ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ 3,52,991 ಹೊಸ ಸೋಂಕು ಪ್ರಕರಣ ಮತ್ತು 2,812 ಸಾವಿನ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.