800 ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುತ್ತಿದ್ದೇವೆ, ದಿಲ್ಲಿಯವರು ಮಾತ್ರ ದೂರುತ್ತಿದ್ದಾರೆ: ಐನಾಕ್ಸ್ ಸಂಸ್ಥೆಯ ಹೇಳಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ.26: ದೇಶದಾದ್ಯಂತ 800 ಆಸ್ಪತ್ರೆಗಳಿಗೆ ತಾನು ಆಮ್ಲಜನಕ ಪೂರೈಸುತ್ತಿದ್ದೇನೆ. ಆಮ್ಲಜನಕ ಪೂರೈಕೆ ಬಗ್ಗೆ ದಿಲ್ಲಿಯ ಆಸ್ಪತ್ರೆಗಳು ಮಾತ್ರ ದೂರುತ್ತಿವೆ ಎಂದು ಆಮ್ಲಜನಕ ಪೂರೈಕೆ ಸಂಸ್ಥೆ ಐನಾಕ್ಸ್ ಹೇಳಿದೆ.
ದಿಲ್ಲಿಗೆ ರವಾನೆಯಾಗಬೇಕಿದ್ದ ಆಮ್ಲಜನಕದ ಪ್ರಮಾಣವನ್ನು ಕೇಂದ್ರ ಸರಕಾರ ಕಡಿತಗೊಳಿಸಿದ್ದು ಸಂಸ್ಥೆ ಉತ್ಪಾದಿಸುವ ಆಮ್ಲಜನಕದ ಬಹುಪಾಲು ಉತ್ತರಪ್ರದೇಶ ಮತ್ತು ರಾಜಸ್ತಾನಕ್ಕೆ ನಿಗದಿಗೊಳಿಸಲಾಗಿದೆ. ದಿಲ್ಲಿಗೆ ನಿಗದಿಯಾಗಿದ್ದ 105 ಮೆಟ್ರಿಕ್ ಟನ್ನಿಂದ ಮತ್ತಷ್ಟು ಕಡಿತಗೊಳಿಸಿ ಈಗ 80 ಮೆಟ್ರಿಕ್ ಟನ್ಗೆ ಇಳಿಸಲಾಗಿದೆ. ಅಲ್ಲದೆ ಪಾಣಿಪತ್ನ ‘ಏರ್ಲಿಕ್ವಿಡ್’ ಸಂಸ್ಥೆಯಿಂದ ಇನ್ನೂ 80 ಮೆಟ್ರಿಕ್ ಟನ್ ಆಮ್ಲಜನಕವನ್ನು ರವಾನಿಸಲು ನಮಗೆ ಸೂಚಿಸಲಾಗಿದೆ. ಉತ್ಪಾದಕರಾಗಿರುವ ನಾವು ಈಗ ಮೂರನೇ ಸಂಸ್ಥೆಯಿಂದ ರವಾನೆದಾರರ ಕಾರ್ಯ ನಿರ್ವಹಿಸಬೇಕೇ? ಎಂದು ದಿಲ್ಲಿಯ ನ್ಯಾಯಾಲಯದಲ್ಲಿ ಐನಾಕ್ಸ್ ಸಂಸ್ಥೆಯ ವಕೀಲರು ಹೇಳಿದ್ದಾರೆ.
ಆಸ್ಪತ್ರೆಗಳಿಗೆ 125 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ದಿಲ್ಲಿ ಸರಕಾರ ರವಿವಾರ ಆದೇಶ ಜಾರಿಗೊಳಿಸಿದೆ. ಆದರೆ ಇದೇ ದಿನ ಕೇಂದ್ರ ಸರಕಾರ ಹೊರಡಿಸಿರುವ ಆದೇಶದಲ್ಲಿ ದಿಲ್ಲಿಗೆ ಕೇವಲ 80 ಮೆಟ್ರಿಕ್ ಟನ್ ನಿಗದಿಗೊಳಿಸಿರುವುದಾಗಿ ಸೂಚಿಸಿದೆ. ಈಗ ನಾವೇನು ಮಾಡಬೇಕು ? ದೇಶದಾದ್ಯಂತ 800 ಆಸ್ಪತ್ರೆಗಳಿಗೆ ಪೂರೈಸುತ್ತಿದ್ದೇವೆ, ದಿಲ್ಲಿಯ ಆಸ್ಪತ್ರೆಗಳಿಂದ ಮಾತ್ರ ಯಾಕೆ ದೂರು ಕೇಳಿಬರುತ್ತಿದೆ ಎಂದು ಐನಾಕ್ಸ್ ಸಂಸ್ಥೆಯ ಮುಖ್ಯಸ್ಥ ಸಿದ್ದಾರ್ಥ ಜೈನ್ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.
490 ಮೆಟ್ರಿಕ್ ಟನ್ ನಿಗದಿಯಾಗಿದ್ದರೂ ದಿಲ್ಲಿಗೆ ಸುಮಾರು 300 ಮೆಟ್ರಿಕ್ ಟನ್ಗಳಷ್ಟು ಆಮ್ಲಜನಕ ಮಾತ್ರ. ಈ ಕೊರತೆಯಿಂದಾಗಿ ಆಸ್ಪತ್ರೆಗಳು ನಮಗೆ ತುರ್ತು ಸಂದೇಶ ರವಾನಿಸುತ್ತಿವೆ. ನಾವು ಕಳೆದ 7 ದಿನಗಳಿಂದ ನಿದ್ದೆ ಮಾಡಿಲ್ಲ. ದಯವಿಟ್ಟು ಈ ಗೊಂದಲವನ್ನು ಇತ್ಯರ್ಥಗೊಳಿಸಿ ಮತ್ತು ಯಾವ ಆಸ್ಪತ್ರೆಗೆ ಎಷ್ಟು ಪ್ರಮಾಣದಲ್ಲಿ ಪೂರೈಸಬೇಕು ಎಂಬುದನ್ನು ನಮಗೆ ತಿಳಿಸಿ. ನಮಗೆ ಸೂಚಿಸಿದ ಯೋಜನೆಗೆ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಮಧ್ಯದಲ್ಲೇ ಲಾರಿಗಳನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ಹರ್ಯಾಣ ನಂಬರ್ಪ್ಲೇಟ್ ಹೊಂದಿರುವ ನಮ್ಮ 4 ಟ್ಯಾಂಕರ್ಗಳನ್ನು ರಾಜಸ್ತಾನದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜೈನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.







