ಜನರು ತಮ್ಮ ಮನೆಗಳಲ್ಲಿಯೂ ಮಾಸ್ಕ್ ಧರಿಸಬೇಕಾದ ಕಾಲವೀಗ ಬಂದಿದೆ: ಕೇಂದ್ರ ಆರೋಗ್ಯ ಸಚಿವಾಲಯ

ಹೊಸದಿಲ್ಲಿ, ಎ.26: ಕೋರೋನವೈರಸ್ನ ಎರಡನೇ ಅಲೆಯ ವಿರುದ್ಧದ ಹೋರಾಟದ ನಡುವೆಯೇ ಜನರ ಭೀತಿಯನ್ನು ನಿವಾರಿಸಲು ಮುಂದಾಗಿರುವ ಕೇಂದ್ರ ಸರಕಾರವು,ಅನಗತ್ಯ ಆತಂಕವು ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದ್ದನ್ನೇ ಮಾಡುತ್ತದೆ ಎಂದು ಹೇಳಿದೆ. ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಕೋವಿಡ್-19 ಶಿಷ್ಟಾಚಾರಗಳ ಕಟ್ಟುನಿಟ್ಟಿನ ಪಾಲನೆಯ ಅಗತ್ಯವನ್ನು ಒತ್ತಿ ಹೇಳಿರುವ ಅದು, ಜನರೀಗ ತಮ್ಮ ಮನೆಗಳಲ್ಲಿಯೂ ಮಾಸ್ಕ್ ಧರಿಸಿರಬೇಕಾದ ಕಾಲವು ಬಂದಿದೆ ಎಂದು ತಿಳಿಸಿದೆ. ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವ ಅಗತ್ಯಕ್ಕೂ ಒತ್ತು ನೀಡಿರುವ ಸರಕಾರವು ಮಹಿಳೆಯರು ತಮ್ಮ ಋತುಸ್ರಾವದ ಅವಧಿಯಲ್ಲಿ ಕೋವಿಡ್-19 ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು,ಹೆಚ್ಚಿನ ಜನರು ಕೋವಿಡ್ ಭೀತಿಯಿಂದ ಆಸ್ಪತ್ರೆಗಳಿಗೆ ದಾಖಲಾಗಿರುವುದು ಕಂಡುಬಂದಿದೆ. ಕೇವಲ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗಳಿಗೆ ದಾಖಲಾಗಬೇಕು ಎಂದು ಒತ್ತಿ ಹೇಳಿದರು.
ವೈದ್ಯಕೀಯ ಆಮ್ಲಜನಕದ ಕೊರತೆಯ ನಡುವೆಯೇ ದೇಶದಲ್ಲಿ ಸಾಕಷ್ಟು ಆಮ್ಲಜನಕ ಲಭ್ಯವಿದೆ ಎಂದ ಅವರು,ಆದರೆ ಅದನ್ನು ಆಸ್ಪತ್ರೆಗಳಿಗೆ ರವಾನಿಸುವುದೇ ಸವಾಲು ಆಗಿದೆ. ಆಸ್ಪತ್ರೆಗಳಿಗೆ ಸಾಕಷ್ಟು ಆಮ್ಲಜನಕ ದೊರೆಯುವಂತಾಗಲು ಸರಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಆಮ್ಲಜನಕವನ್ನು ನ್ಯಾಯಯುತ ರೀತಿಯಲ್ಲಿ ಬಳಸುವಂತೆ ಮತ್ತು ಸೋರಿಕೆಯನ್ನು ತಡೆಯುವಂತೆ ಅವರು ಆಸ್ಪತ್ರೆಗಳಿಗೆ ಸೂಚಿಸಿದರು.
ವೈದ್ಯಕೀಯ ಆಮ್ಲಜನಕದ ವಿವೇಚನಾಪೂರ್ಣ ಬಳಕೆ ಮತ್ತು ರೆಮ್ಡೆಸಿವಿರ್ ಹಾಗೂ ಟೋಸಿಲಿಜುಮಾಬ್ನಂತಹ ಔಷಧಿಗಳಂತಹ ಸೂಕ್ತ ಶಿಫಾರಸು ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ನಿರ್ಣಾಯಕವಾಗಿವೆ ಎಂದ ಅವರು,ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ರೆಮ್ಡೆಸಿವಿರ್ ಬಳಕೆಯ ಪರಿಣಾಮಕಾರಿತ್ವವು ಇನ್ನೂ ಸಾಬೀತಾಗಿಲ್ಲ,ಆದ್ದರಿಂದ ಇತರ ಸೂಚಿತ ಔಷಧಿಗಳನ್ನೂ ಬಳಸುವಂತೆ ಸಲಹೆ ನೀಡಿದರು.
ಹೆಚ್ಚಿನ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗಿದೆಯಾದರೂ ದೇಶದ ಜನಸಂಖ್ಯೆಯನ್ನು ಪರಿಗಣಿಸಿದರೆ ಇವು ಹೆಚ್ಚಿನ ಒತ್ತಡಕ್ಕೊಳಗಾಗುತ್ತವೆ ಎಂದ ಅವರು,ಸೋಂಕನ್ನು ನಿಯಂತ್ರಿಸುವುದು ಬಹು ಮುಖ್ಯವಾಗಿದೆ ಎಂದರು.
ಕೋವಿಡ್-19 ಶಿಷ್ಟಾಚಾರಗಳ ಪಾಲನೆಗೆ ಒತ್ತು ನೀಡಿದ ಅವರು,ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳದಿದ್ದರೆ ಓರ್ವ ಸೋಂಕಿತ ವ್ಯಕ್ತಿ 30 ದಿನಗಳಲ್ಲಿ 406 ಜನರಿಗೆ ಸೋಂಕನ್ನು ಹರಡುತ್ತಾನೆ ಮತ್ತು ದೈಹಿಕ ಒಡ್ಡುವಿಕೆಯನ್ನು ಶೇ.50ರಷ್ಟು ಕಡಿಮೆಗೊಳಿಸಿದರೆ ಓರ್ವ ವ್ಯಕ್ತಿ ಇದೇ ಅವಧಿಯಲ್ಲಿ ಸುಮಾರು 15 ಜನರಿಗೆ ಹಾಗೂ ಶೇ.75ರಷ್ಟು ಕಡಿಮೆಗೊಳಿಸಿದರೆ 2.5 ಜನರಿಗೆ ಸೋಂಕು ಹರಡಬಲ್ಲ ಎನ್ನುವುದನ್ನು ಸಂಶೋಧನೆಯು ತೋರಿಸಿದೆ ಎಂದು ತಿಳಿಸಿದರು.
ಜನರು ತಮ್ಮ ಮನೆಗಳಲ್ಲಿಯೂ ಮಾಸ್ಕ್ ಧರಿಸಿರಬೇಕಾದ ಸಮಯವೀಗ ಬಂದಿದೆ ಎಂದು ಅಗರವಾಲ್ ಹೇಳಿದರು.
ಲಸಿಕೆ ಅಭಿಯಾನ ಕುರಿತಂತೆ ಅವರು,ದೇಶದಲ್ಲಿ ಈವರೆಗೆ 14.19 ಕೋಟಿ ಲಸಿಕೆ ಡೋಸ್ಗಳನ್ನು ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 9.79 ಕೋ.ಜನರು ಮೊದಲ ಡೋಸ್ನ್ನು ಮತ್ತು 1.03 ಕೋ.ಜನರು ಎರಡನೆಯ ಡೋಸ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.