‘ಕೋವಿಡ್ ಸಹಾಯ ಹಸ್ತ’ದ ನೆರವು ಪಡೆಯಲು ಲುಕ್ಮಾನ್ ಬಂಟ್ವಾಳ ಮನವಿ

ಲುಕ್ಮಾನ್ ಬಂಟ್ವಾಳ
ಮಂಗಳೂರು, ಎ. 26: ದೇಶಾದ್ಯಂತ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆಯೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಹಾಗೂ ಆಸ್ಪತ್ರೆ ವ್ಯವಸ್ಥೆಯ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಮನಗಂಡ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಹಾಗೂ ಇನ್ನಿತರ ವೈದ್ಯಕೀಯ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ‘ಕೋವಿಡ್ ಸಹಾಯ ಹಸ್ತ’ (ಹೆಲ್ಪ್ಲೈನ್)ಕ್ಕೆ ಚಾಲನೆ ನೀಡಿದೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಹೆಲ್ಪ್ಲೈನ್ ದಿನದ 24 ಗಂಟೆಯೂ ಸೇವೆಯನ್ನು ನೀಡಲು ಮುಂದಾಗಿದೆ. ಸಹಾಯ ಹಸ್ತ ಮೊ.ಸಂ: 9901415505, 8088451135 ಅಥವಾ 0824- 2214345 ಮೂಲಕ ನುರಿತ ವೈದ್ಯರಿಂದ ಕೋವಿಡ್ ಸಂಬಂಧಿತ ವೈದ್ಯಕೀಯ ಮತ್ತು ಆಸ್ಪತ್ರೆಯಲ್ಲಿ ಬೆಡ್ ಹಾಗೂ ಐಸಿಯು ಬೆಡ್ ಲಭ್ಯವಿರುವ ಮಾಹಿತಿ ಪಡೆಯಬಹುದಾಗಿದೆ.
ಆಕ್ಸಿಜನ್ ವ್ಯವಸ್ಥೆ, ಆ್ಯಂಬುಲೆನ್ಸ್ ವ್ಯವಸ್ಥೆ, ಪ್ಲಾಸ್ಮ ಹಾಗೂ ರಕ್ತದ ವ್ಯವಸ್ಥೆ, ಕೋವಿಡ್ ಲಸಿಕೆ ಹಾಗೂ ಮೃತಪಟ್ಟ ರೋಗಿಗಳ ಅಂತ್ಯಕ್ರಿಯೆ ಮತ್ತಿತರ ಸೇವಯನ್ನು ಒದಗಿಸಲಾಗುವುದು. ಜಿಲ್ಲೆಯ ಎಲ್ಲೆಡೆ ಯುವ ಕಾಂಗ್ರೆಸ್ನ ಮೆಡಿಕಲ್ ತಂಡ ಮತ್ತು ಸ್ವಯಂ ಸೇವಕರ ತಂಡ ಸಕ್ರಿಯವಾಗಿ ಕಾರ್ಯಾಚರಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಮನವಿ ಮಾಡಿದ್ದಾರೆ.







