ಸಂಕಷ್ಟದಲ್ಲಿರುವ ವರ್ತಕರು, ಕಾರ್ಮಿಕರಿಗೆ ಪರಿಹಾರದ ಪ್ಯಾಕೇಜ್ ಘೋಷಿಸಿ: ಡಿ.ಕೆ.ಶಿವಕುಮಾರ್ ಆಗ್ರಹ
''ಹೊಟೇಲ್, ರೆಸ್ಟೋರೆಂಟ್‍ಗಳನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು''

ಬೆಂಗಳೂರು, ಎ. 26: `ರಾಜ್ಯ ಸರಕಾರ ನಾಳೆ(ಎ.27)ಯಿಂದ ಮೇ 10ರ ವರೆಗೆ ಕೋವಿಡ್ ಎರಡನೆ ಅಲೆ ನಿಯಂತ್ರಣ ಮಾಡಲು `ಲಾಕ್‍ಡೌನ್' ಎಂಬ ಪದ ಬಳಕೆ ಮಾಡದೆ ಎಲ್ಲವನ್ನು ಬಂದ್ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಏನು ಬೇಕಾದರೂ ಕ್ರಮ ಕೈಗೊಳ್ಳಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಜನರಿಗೆ ಸರಕಾರ ಕೂಡಲೇ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ 140ಕ್ಕೂ ಹೆಚ್ಚು ವರ್ತಕರು, ಕಾರ್ಮಿಕರು, ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರ ರಾಜ್ಯದ ಹಿತವನ್ನ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದರೆ, ಅದನ್ನು ಅವರು ಒಪಿಕೊಳ್ಳುತ್ತಿಲ್ಲ. ಆರೋಗ್ಯ ಕಾಪಾಡಲು ಏನು ಬೇಕಾದರೂ ಮಾಡಲಿ. ಈ ನಿರ್ಬಂಧದಿಂದ ತೊಂದರೆ ಎದುರಿಸುವವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ. ಬಡವರಿಗೆ, ಕೆಲಸ ಇಲ್ಲದವರ ಖಾತೆಗಳಿಗೆ ಸರಕಾರ ಕೂಡಲೇ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಹೆಚ್ಚಿನ ಜನ ಸಾವನ್ನಪ್ಪುತ್ತಿದ್ದಾರೆ. ನನ್ನ ರಾಮನಗರ ಜಿಲ್ಲೆಯಲ್ಲಿ 75 ಜನರು ಸಾವನ್ನಪ್ಪಿದ್ದಾರೆ. ಆದರೆ, ಸರಕಾರಿ ಲೆಕ್ಕ ಸರಿಯಾಗಿ ತೋರಿಸುತ್ತಿಲ್ಲ ಎಂದು ದೂರಿದ ಶಿವಕುಮಾರ್, ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಜನರ ಜೀವ ಉಳಿಸಲು ಮೊದಲ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಸರಕಾರಕ್ಕೆ ಪ್ರತಿಪಕ್ಷ ನಾವು ಎಲ್ಲ ಸಹಕಾರ ನೀಡಲು ಸಿದ್ಧ ಎಂದರು.
ತೊಂದರೆ ಕೊಡಬೇಡಿ: ರಾಜ್ಯ ಸರಕಾರ ಕೋವಿಡ್ ನಿರ್ಬಂಧದ ನೆಪದಲ್ಲಿ ಜನರಿಗೆ ಸಹಾಯ ಮಾಡಲು ಆಗದಿದ್ದರೂ ತೊಂದರೆ ಕೊಡುವುದು ಬೇಡ. ಅವರ ನೋವು, ದುಗುಡವನ್ನು ನಾನು ನೋಡಿದ್ದೇವೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಈ ದೇಶವನ್ನು ರಕ್ಷಣೆ ಮಾಡುತ್ತಿರುವ, ಉದ್ಯೋಗ ಸೃಷ್ಟಿಸಿ, ಸರಕಾರಕ್ಕೆ ತೆರಿಗೆ ಕಟ್ಟಿ, ಸಮಾಜ ರಕ್ಷಿಸುತ್ತಿರುವ ವರ್ತಕರಿಗೆ ಸರಕಾರದ ಮೇಲೆ ಇಷ್ಟು ಬೇಸರವಾಗಿರುವುದನ್ನು ನೋಡಿದರೆ ಈ ಸರಕಾರದ ಕೊನೆ ದಿನಗಳು ಕಾಣುತ್ತಿರುವುದಕ್ಕೆ ಸಾಕ್ಷಿ ಎಂದು ಶಿವಕುಮಾರ್ ಭವಿಷ್ಯ ನುಡಿದರು.
ನಾನು ಇಂದು ವ್ಯಾಪಾರಸ್ಥ ವರ್ಗದ ಜತೆ ಸಮಾಲೋಚನೆ ನಡೆಸಿದ್ದು, ಅವರ ಪರವಾಗಿ ಮಾತನಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಅವರ ಜತೆ ಇರುತ್ತದೆ ಎಂದು ಹೇಳಲು ಬಯಸುತ್ತೇನೆ. ನಮ್ಮ ಪಕ್ಷ ಕೇವಲ ಕಾರ್ಮಿಕರು, ರೈತರ ಪರವಾಗಿ ಮಾತ್ರವಲ್ಲ, ಎಲ್ಲ ವರ್ಗದ ಜನರ ಪರವಾಗಿ ಇರುತ್ತೇವೆ. ಉದ್ಯೋಗಸ್ಥರಂತೆ ಉದ್ಯೋಗದಾತರೂ ಮುಖ್ಯ. ಅವರನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ತೆರಿಗೆ ಮನ್ನಾ ಮಾಡಿ: ಕೋವಿಡ್ ಕಾರಣ ಒಂದು ವರ್ಷದಿಂದ ವ್ಯಾಪಾರ ನಿಂತಿದೆ. ಮುಂದಿನ ಒಂದು ವರ್ಷ ಈಗಾಗಿರುವ ಹೊಡೆತದಿಂದ ಚೇತರಿಕೆ ಆಗುವುದಿಲ್ಲ. ಹೀಗಾಗಿ ಸರಕಾರ 2 ವರ್ಷಗಳ ಕಾಲ ಕಮರ್ಷಿಯಲ್ ಪ್ರಾಪರ್ಟಿ ಟ್ಯಾಕ್ಸ್ ಮನ್ನಾ ಮಾಡಬೇಕು. ಬರಗಾಲ ಬಂದಾಗ ರೈತರಿಗೆ ಆಸ್ತಿ ತೆರಿಗೆ ಮನ್ನಾ ಮಾಡಿದ್ದೇವೆ. ಅದೇ ರೀತಿ ಇವರಿಗೆ ಆಸ್ತಿ ತೆರಿಗೆ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಎಲ್ಲ ಸಾಲಗಳ ಮರುಪಾವತಿ ಅವಧಿ 2 ವರ್ಷ ಮುಂದೂಡಬೇಕು. ರಾಜ್ಯ ಸರಕಾರ ಒಂದು ಮಿತಿಯವರೆಗೂ ಸಾಲಮನ್ನಾ ಮಾಡಬೇಕು. ರಾಜ್ಯ ಸರಕಾರಕ್ಕೆ ಇದರ ವ್ಯಾಪ್ತಿ ಬರುವುದಿಲ್ಲ. ಆದರೆ, ಸಭೆ ಕರೆದು 10-20 ಲಕ್ಷ ರೂ.ವರೆಗಿನ ಸಾಲದವರಿಗೆ ಬಡ್ಡಿ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ ಅವರು, 25 ಸಂಸದರು ಮತ ಹಾಕಿಸಿಕೊಂಡು, ತಮ್ಮ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಧ್ವನಿ ಎತ್ತುತ್ತಿಲ್ಲ. ಅವರ ಬಾಯಿಗೆ ಬೀಗ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.
ಅಗತ್ಯ ಸೇವೆ ಎಂದು ಪರಿಗಣಿಸಿ: ಸಾರಿಗೆ ಮಾದರಿಯಲ್ಲೆ ಹೊಟೇಲ್, ರೆಸ್ಟೋರೆಂಟ್‍ಗಳನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು. ನಾವು ಜನರಿಗೆ ಊಟ ಕೊಡುತ್ತಿದ್ದೇವೆ. ಇಡೀ ಉದ್ಯಮ ಹದಗೆಟ್ಟಿದೆ. ಈ ಎಲ್ಲ ಕ್ಷೇತ್ರಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಬೇಕು ಎಂದು ಕೋರಿದ ಅವರು, ವಾಹನ ಸಾಲ ಪಡೆದವರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಎಲ್ಲ ವಾಹನ ಮಾಲಕರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಪಡಿಸಿದರು.
ಕೇಂದ್ರದ ಆತ್ಮನಿರ್ಭರ ಭಾರತ ಎಂದು ಹೇಳಿ ಹೊರ ದೇಶದವರಿಗೆ ಆನ್‍ಲೈನ್ ಮೂಲಕ ಇಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಟ್ಟು, ಇಲ್ಲಿನ ಸಣ್ಣ ಕೈಗಾರಿಕೆಗಳಿಗೆ ಹೊಡೆತ ನೀಡುತ್ತಿದ್ದಾರೆಂದು ಮಾಲಕರು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ವರ್ತಕರ ಧ್ವನಿಯಾಗಿ ನಾವು ಕೆಲಸ ಮಾಡುತ್ತಿದ್ದು, ಇವರ ನೇತೃತ್ವದಲ್ಲೇ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ. ನೀವು ಇವರ ನೆರವಿಗೆ ಬಾರದಿದ್ದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.







