ಆನ್‌ಲೈನ್ ಕಂಪೆನಿಗಳ ಡೆಲಿವರಿ ನಿರ್ಬಂಧಕ್ಕೆ ಏಮ್ರಾ ಆಗ್ರಹ
ಉಡುಪಿ, ಎ.26: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವಿದೇಶಿ ಆನ್‌ಲೈನ್ ಕಂಪೆನಿಗಳು ಅಗತ್ಯವಿಲ್ಲದ ಉತ್ಪನ್ನಗಳನ್ನು ಜನರಿಗೆ ಮಾರಾಟ ಮಾಡುವುದನ್ನು ಕರ್ನಾಟಕದಲ್ಲಿ ನಿರ್ಬಂಧಿಸುವಂತೆ ಹಾಗೂ ಅವರ ಆನ್‌ಲೈನ್ ಡೆಲಿವರಿಯನ್ನು ಸಹ ಸಂಪೂರ್ಣವಾಗಿ ನಿಲ್ಲಿಸುವಂತೆ ಆಲ್‌ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ (ಏಮ್ರಾ) ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಮ್ರಾದ ರಾಜ್ಯ ಕಾರ್ಯದರ್ಶಿ ಬಿ.ಸುಹಾಸ್ ಕಿಣಿ, ಸರಕಾರ ನೊಂದ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ನೀಡದೇ, ವಿದೇಶಿ ಆನ್‌ಲೈನ್ ಕಂಪೆನಿಗಳಾದ ಪ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ಗಳಿಗೆ ವ್ಯವಹಾರ ನಡೆಸಲು ಅವಕಾಶ ಮಾಡಿಕೊಡುವ ಮೂಲಕ ಸ್ಥಳೀಯ ವ್ಯಾಪಾರಿಗಳ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದರು.
ಕೊರೋನ ಕಾರಣಕ್ಕಾಗಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಿರುವ ಸರಕಾರದ ಕ್ರಮವನ್ನು ಸ್ಥಳೀಯ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಆದರೆ ಆನ್‌ಲೈನ್ ಕಂಪೆನಿಗಳಾದ ಅಮೆಜಾನ್ ಹಾಗೂ ಪ್ಲಿಪ್‌ಕಾರ್ಟ್ ಕಂಪೆನಿಗಳಿಗೆ ಅವರ ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ. ಯಾವುದೇ ಕೋವಿಡ್ ಮುಂಜಾಗ್ರತೆಗಳನ್ನು ವಹಿಸದೇ ಈ ಕಂಪೆನಿಗಳು ಮನೆಮನೆಗೆ ಪಾರ್ಸೆಲ್ ತಲುಪಿಸುತ್ತಿವೆ ಎಂದವರು ದೂರಿದರು.
ಸ್ಥಳೀಯ ವ್ಯಾಪಾರಿಗಳು ವ್ಯಾಪಾರ ಮಾಡಿದರೆ, ಅಂಗಡಿಗಳನ್ನು ತೆರೆದರೆ ಮಾತ್ರ ಕೊರೋನಾ ಹರಡುವುದೇ, ಅವರಿಂದ ಕೊರೋನ ಹರಡು ವುದಿಲ್ಲವೇ ಎಂದು ಪ್ರಶ್ನಿಸಿದ ಸುಹಾಸ್ ಕಿಣಿ, ಇದು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಮಲತಾಯಿ ಧೋರಣೆ ಎಂದು ಟೀಕಿಸಿದರು.
ಕೊರೋನ ವಿರುದ್ಧ ಸರಕಾರ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಸಣ್ಣ ಮೊಬೈಲ್ ವ್ಯಾಪಾರಿಗಳ ಸಂಪೂರ್ಣ ಬೆಂಬಲವಿದೆ. ಆದರೆ ಕರ್ನಾಟಕ ಸರಕಾರ ವಿದೇಶಿ ಆನ್‌ಲೈನ್ ಕಂಪೆನಿಗಳಿಗೆ ಎಲ್ಲಾ ರೀತಿಯ ಸರಕುಗಳನ್ನು ಸರಬರಾಜು ಮಾಡಲು ಅವಕಾಶಕೊಟ್ಟು ಪರೋಕ್ಷ ವಾಗಿ ಅವರ ಬೆಂಬಲಕ್ಕೆ ನಿಂತಿದೆ ಎಂದು ಕಿಣಿ ಹೇಳಿದರು.
ಸ್ಥಳೀಯ ಮೊಬೈಲ್ ವ್ಯವಹಾರಗಳ ಮೇಲೆ ಎಲ್ಲಾ ಮೊಬೈಲ್ ವಿತರಕರು, ಸಣ್ಣ ಮೊಬೈಲ್ ವ್ಯಾಪಾರಿಗಳು, ಮಾರಾಟ ಅಧಿಕಾರಿಗಳು, ಮಾರಾಟ ಪ್ರವರ್ತಕರು ಹಾಗೂ ಅವರ ಕುಟುಂಬ ಅವಲಂಬಿತವಾಗಿದೆ.ಕಳೆದ ಬಾರಿ ಆದ ಲಾಕ್‌ಡೌನ್‌ನ ಪೆಟ್ಟಿನಿಂದಲೇ ಸಣ್ಣ ಮೊಬೈಲ್ ವ್ಯಾಪಾರಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಎರಡನೇ ಮಹಾಮಾರಿ ಅಲೆ ಮತ್ತೆ ಸಣ್ಣ ಮೊಬೈಲ್ ವ್ಯಾಪಾರಿಗಳ ಜೀವದ ಜೊತೆ ಆಟವಾಡುತ್ತಿದೆ ಎಂದರು.
ರಾಜ್ಯ ಸರಕಾರ ಸ್ಥಳೀಯ ವ್ಯಾಪಾರಿಗಳ ಹಿತರಕ್ಷಣೆಗಾಗಿ ಕೂಡಲೇ ವಿದೇಶಿ ಆನ್‌ಲೈನ್ ಕಂಪೆನಿಗಳ ವ್ಯಾಪಾರವನ್ನು ನಿರ್ಬಂಧಿಸಬೇಕು ಎಂಬುದು ನಮ್ಮ ಒಕ್ಕೊರಲ ಮನವಿಯಾಗಿದೆ ಎಂದು ಸುಹಾಸ್ ಕಿಣಿ ನುಡಿದರು.
ಏಮ್ರಾ ಉಡುಪಿಯ ಅಧ್ಯಕ್ಷ ಸಂದೇಶ್ ಬಲ್ಲಾಳ್ ಹಾಗೂ ಕಾರ್ಯದರ್ಶಿ ವಿವೇಕ್ ಜಿ.ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.







