ಕೊರೋನ ಸೋಂಕಿಗೆ ಬಲಿಯಾದ ಮಹಿಳೆಯ ಮಾಂಗಲ್ಯ ಸರ ಕಳ್ಳತನ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಚಿಕ್ಕಮಗಳೂರು, ಎ.26: ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಮಹಿಳೆಯ ಸಂಬಂಧಿಕರೇ ಅಪಹರಿಸಿದ್ದಾರೆ ಎನ್ನಲಾಗಿದ್ದು, ಆದರೆ ವೈದ್ಯರು, ಸಿಬ್ಬಂದಿ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ ಎಂಬ ಘಟನೆ ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾ ಸ್ಪತ್ರೆಯಲ್ಲಿ ನಡೆದಿದೆ.
ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆ ರವಿವಾರ ರಾತ್ರಿ ಮೃತಪಟ್ಟಿದ್ದರು. ಮೃತ ಮಹಿಳೆಯ ಶವ ಆಸ್ಪತ್ರೆಯ ಬೆಡ್‍ನಲ್ಲೇ ಇದ್ದ ವೇಳೆ ಮಹಿಳೆಯ ಸಂಬಂಧಿಕನೊಬ್ಬ ಮೃತದೇಹವನ್ನು ನೋಡುವಂತೆ ನಾಟಕವಾಡುತ್ತಲೇ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಸರವನ್ನು ಬಿಚ್ಚಿಕೊಂಡು ತೆರಳಿದ್ದಾನೆ ಎನ್ನಲಾಗಿದೆ. ಬಳಿಕ ವೈದ್ಯರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡುವ ವೇಳೆ ಮೃತ ದೇಹದ ಕುತ್ತಿಗೆಯಲ್ಲಿ ಮಾಂಗಲ್ಯ ಸರ ಇಲ್ಲದಿರುವುದನ್ನು ಗಮನಿಸಿ, ವೈದ್ಯರು ಹಾಗೂ ಸಿಬ್ಬಂದಿಯೇ ಮಾಂಗಲ್ಯದ ಸರವನ್ನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಆರೋಪದ ಹಿನ್ನೆಲೆಯಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಆಸ್ಪತ್ರೆಯ ವಾರ್ಡ್‍ನಲ್ಲಿ ಮೃತ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಅಪಹರಿಸಿರುವುದು ಬೆಳಕಿಗೆ ಬಂದಿದೆ. ಸಿಸಿ ಟಿವಿಯಲ್ಲಿ ಕಂಡು ಬಂದ ವ್ಯಕ್ತಿ ಮೃತ ಮಹಿಳೆಯ ಸಂಬಂಧಿ ಎಂದು ತಿಳಿದು ಬಂದಿದೆ.
ಮೃತ ಮಹಿಳೆಯ ಸಂಬಂಧಿಗಳು ಮಾಂಗಲ್ಯ ಸರ ಕಳ್ಳತನದ ಆರೋಪವನ್ನು ವೈದ್ಯರು, ಸಿಬ್ಬಂದಿ ಮೇಲೆ ಹೊರಿಸಿರುವುದು ಸುಳ್ಳು ಆರೋಪವಾಗಿದೆ. ಮಹಿಳೆಯ ಸಂಬಂಧಿಯೇ ಸರವನ್ನು ಬಿಚ್ಚಿಟ್ಟುಕೊಂಡಿದ್ದರು. ಸಿಸಿ ಟಿವಿಯಲ್ಲಿ ಇದು ಸಾಬೀತಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ತಿಳಿಸಿದ್ದಾರೆ.







