ಆರೋಗ್ಯ ಹಾಗೂ ಅಹಾರ ಭದ್ರತೆ ಖಾತ್ರಿಪಡಿಸಲು ಡಿವೈಎಫ್‌ಐ ಒತ್ತಾಯ
ಮಂಗಳೂರು, ಎ.26: ಹೆಚ್ಚುತ್ತಿರುವ ಕೊರೋನ ಸೋಂಕು ನಿಯಂತ್ರಿಸಲು ಆಸ್ಪತ್ರೆಯ ಸೌಲಭ್ಯಗಳನ್ನು ಹೆಚ್ಚಿಸಿ, ಬೆಡ್-ಆಕ್ಸಿಜನ್ ಕೊರತೆ ಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ರಾಜ್ಯ ಸರಕಾರ ತನ್ನ ಹೊಣೆಗೇಡಿತನ ಮರೆಮಾಚಲು ಅರಾಜಕ ರೀತಿಯಲ್ಲಿ ಕೋವಿಡ್ ಕರ್ಫ್ಯೂ ಜಾರಿಗೊಳಿಸಿರುವುದು ಖಂಡನೀಯ ಎಂದು ತಿಳಿಸಿರುವ ಡಿವೈಎಫ್‌ಐ ಕರ್ಫ್ಯೂ ಬದಲಿಗೆ ಕಠಿಣ ಸುರಕ್ಷಾ ಕ್ರಮ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಒತ್ತಾಯಿಸಿದೆ.
ಕಳೆದ ವರ್ಷದ ಕೋವಿಡ್ ಸೋಂಕಿನ ಪರಿಣಾಮದ ಬಗ್ಗೆ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು. ತಜ್ಞರು ನೀಡಿದ ಸಲಹೆಗಳನ್ನು ಗಂಭೀರ ವಾಗಿ ಪರಿಗಣಿಸದೆ ಉದಾಸೀನ ತೋರಿದ್ದರಿಂದ ಕೋವಿಡ್ ಪ್ರಕರಣದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಆಕ್ಸಿಜನ್, ಹಾಸಿಗೆ ಕೊರತೆಯಿಂದ ಕಂಗೆಟ್ಟಿರುವ ಸೋಂಕು ಪೀಡಿತರನ್ನು ಸರಕಾರದ ಹೊಣೆಗೇಡಿತನದಿಂದ ಖಾಸಗಿ ಆಸ್ಪತ್ರೆ, ಔಷಧಿ ಮಾಫಿಯಾಗಲು ಸುಲಿದು ತಿನ್ನುತ್ತಿವೆ. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿಟ್ಟು ರಾಜ್ಯದಲ್ಲಿ ಕೊರೋನ ಪೀಡಿತ ಜನತೆಗೆ ಉಚಿತವಾಗಿ ಚಿಕಿತ್ಸೆ ಸೌಲಭ್ಯವನ್ನು ಒದಗಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಲಾಕ್‌ಡೌನ್ ಜಾರಿ ಮಾಡಿರುವುದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಳ್ಳಲಿದೆ. ನಿರುದ್ಯೋಗ ಹಾಗೂ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಹೆಚ್ಚಲಿದೆ. ಸಣ್ಣ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರು ಹಸಿವಿನ ದವಡೆಗೆ ಜಾರಲಿದ್ದಾರೆ. ಹಾಗಾಗಿ ಸರಕಾರ ಆರೋಗ್ಯ ಮತ್ತು ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.







