ನಿರ್ಧಿಷ್ಟ ಪ್ರದೇಶಕ್ಕೆ ಸೀಮಿತ ನಿರ್ಬಂಧ ವಿಧಿಸಿ: ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ

ಹೊಸದಿಲ್ಲಿ, ಎ.26: ಏರುಗತಿಯಲ್ಲಿರುವ ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಕನಿಷ್ಟ 14 ದಿನ ನಿರ್ಧಿಷ್ಟ ಪ್ರದೇಶಕ್ಕೆ ಸೀಮಿತ ನಿರ್ಬಂಧ ವಿಧಿಸಿ ಕಠಿಣ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.
ಜೊತೆಗೆ, ಶೀಷೆ ಮತ್ತು ಬಾಟಲಿಗಳನ್ನು ತಯಾರಿಸುವ ಕೈಗಾರಿಕೆಗಳು, ಔಷಧ ಕ್ಷೇತ್ರ ಮತ್ತು ರಕ್ಷಣಾ ಪಡೆಗಳಿಗೆ ದ್ರವರೂಪದ ಆಮ್ಲಜನಕವನ್ನು ಬಳಸಲು ಅವಕಾಶ ನೀಡಲಾಗಿದೆ. ಕೊರೋನ ಸೋಂಕು ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೊರೋನ ನಿರ್ವಹಣೆ ಮತ್ತು ನಿಯಂತ್ರಣ ಉಪಕ್ರಮಗಳನ್ನು ಜಾರಿಗೊಳಿಸಿ ಪರಿಸ್ಥಿತಿ ನಿಯಂತ್ರಿಸುವ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತ್ವರಿತವಾಗಿ ಗಮನ ಹರಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಸೋಮವಾರ ಬರೆದಿರುವ ಪತ್ರದಲ್ಲಿ ಸೂಚಿಸಲಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲೆ/ಉಪ ಜಿಲ್ಲೆ/ನಗರ/ವಾರ್ಡ್ ಮಟ್ಟದಲ್ಲಿ ಸ್ಥಳೀಯ ನಿರ್ಬಂಧಗಳನ್ನು ಜಾರಿಗೊಳಿಸಬಹುದು. ರಾತ್ರಿ ಕರ್ಫ್ಯೂ ಜಾರಿ, ಮಾಲ್‌ಗಳನ್ನು, ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಮುಚ್ಚುವುದು, ಕಚೇರಿಗಳಲ್ಲಿ 50% ಸಿಬಂದಿಯೊಂದಿಗೆ ಕಾರ್ಯನಿರ್ವಹಣೆ ಮುಂತಾದ ಕ್ರಮಗಳನ್ನು ಸೂಚಿಸಲಾಗಿದೆ. ಜನತೆ ಒಟ್ಟುಸೇರುವುದನ್ನು ನಿಷೇಧಿಸುವುದು, ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಜಾತ್ರೆ ಸಂಬಂಧಿಸಿದ ಹಾಗೂ ಇತರ ಸಭೆಗಳನ್ನು ನಿಷೇಧಿಸುವುದು, ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು 50 ಜನರಿಗೆ ಮಾತ್ರ ಅವಕಾಶ ನೀಡುವುದು, ಅಂತ್ಯಸಂಸ್ಕಾರದಲ್ಲಿ 20 ಜನರಿಗೆ ಮಾತ್ರ ಅವಕಾಶ ನೀಡುವುದು ಮುಂತಾದ ಕ್ರಮಗಳನ್ನು ಅನುಸರಿಸಬಹುದು. ಸ್ಥಳೀಯ ನಿರ್ಬಂಧ ಧ 14 ದಿನದವರೆಗೆ ಜಾರಿಯಲ್ಲಿರಬೇಕು ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.







