ಎಪ್ರಿಲ್‌ನಲ್ಲೇ 34 ವೈದ್ಯರನ್ನು ಬಲಿ ಪಡೆದ ಕೊರೋನ ಎರಡನೇ ಅಲೆ

ಹೊಸದಿಲ್ಲಿ, ಎ.26: ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನ ಸೋಂಕಿನ ಎರಡನೇ ಅಲೆಯಲ್ಲಿ ಎಪ್ರಿಲ್ ತಿಂಗಳೊಂದರಲ್ಲೇ ಕನಿಷ್ಟ 34 ವೈದ್ಯರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸೋಮವಾರ ಬಿಡುಗಡೆಗೊಳಿಸಿರುವ ಅಂಕಿಅಂಶ ತಿಳಿಸಿದೆ.
ಮಹಾರಾಷ್ಟ್ರದ 28 ವರ್ಷದ ಡಾಕ್ಟರ್ ಸೋಂಕಿಗೆ ಬಲಿಯಾದ ವೈದ್ಯರಲ್ಲಿ ಅತ್ಯಂತ ಕಿರಿಯರಾಗಿದ್ದಾರೆ. ಇತರ ಇಬ್ಬರು ವೈದ್ಯರು 30 ವರ್ಷದೊಳಗಿನವರು. ಸೋಂಕಿನ ಎರಡನೇ ಅಲೆಯಲ್ಲಿ ಮೃತಪಟ್ಟ ವೈದ್ಯರಲ್ಲಿ 50ರಿಂದ 70 ವರ್ಷದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ 40ರಿಂದ 49 ವರ್ಷದವರೂ ಗಮನಾರ್ಹ ಪ್ರಮಾಣದಲ್ಲಿದ್ದಾರೆ ಎಂದು ಐಎಂಎ ಹೇಳಿದೆ.
ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತಲಾ 5 ವೈದ್ಯರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದು ದಿಲ್ಲಿ ಮತ್ತು ಉತ್ತರಪ್ರದೇಶದಲ್ಲಿ ತಲಾ 4 ವೈದ್ಯರು ಬಲಿಯಾಗಿದ್ದಾರೆ. ಸೋಂಕಿನಿಂದ ಮೃತಪಟ್ಟ ಪ್ರತೀ ವೈದ್ಯರು ಕೊರೋನ ಲಸಿಕೆ ಪಡೆದಿರುವ ಕುರಿತ ವಿವರವನ್ನು ಪರಿಶೀಲಿಸಲಾಗುತ್ತಿದೆ. ಇದರ ವರದಿಯ ಬಳಿಕ ಲಸಿಕೆಯ ಪರಿಣಾಮಕಾರಿತ್ವದ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಐಎಂಎ ಹಿರಿಯ ಸದಸ್ಯ ರವಿ ವಾಂಖೇಡ್ಕರ್ ಹೇಳಿದ್ದಾರೆ.
ದೇಶದಲ್ಲಿ ಜನವರಿ 16ರಂದು ಆರಂಭವಾಗಿದ್ದ ಕೊರೋನ ಲಸಿಕೆ ಅಭಿಯಾನದ ಆರಂಭಿಕ ಹಂತದಲ್ಲಿ ಆರೋಗ್ಯ ಕ್ಷೇತ್ರದ ಸಿಬಂದಿಗಳಿಗೆ ಕೇಂದ್ರ ಸರಕಾರ ಅವಕಾಶ ನೀಡಿತ್ತು. ಕನಿಷ್ಟ 80% ಆರೋಗ್ಯ ಕ್ಷೇತ್ರದ ಸಿಬಂದಿಗಳು ಲಸಿಕೆಯ ಪ್ರಥಮ ಡೋಸ್ ಪಡೆದಿದ್ದಾರೆ ಎಂದು ಸರಕಾರ ಹೇಳಿದೆ. ಕಳೆದ ವರ್ಷ ಕೊರೋನ ಸೋಂಕಿನಿಂದಾಗಿ ಕನಿಷ್ಟ 730 ವೈದ್ಯರು ಮೃತಪಟ್ಟಿರುವುದಾಗಿ ಐಎಂಎ ಹೇಳಿತ್ತು. ಆದರೆ ಸಂಸತ್ತಿನಲ್ಲಿ ಈ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದ ಕೇಂದ್ರ ಸರಕಾರ, ಮೃತಪಟ್ಟ ವೈದ್ಯರ ಸಂಖ್ಯೆಯ ಬಗ್ಗೆ ಮಾಹಿತಿಯಿಲ್ಲ ಎಂದಿತ್ತು. ಕೋವಿಡ್-19 ಕರ್ತವ್ಯದ ಸಂದರ್ಭದಲ್ಲಿ ಮೃತಪಡುವ ಆರೋಗ್ಯಕ್ಷೇತ್ರದ ಸಿಬಂದಿಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್‌ನಡಿ 50 ಲಕ್ಷ ರೂ. ವಿಮಾ ಪರಿಹಾರ ನೀಡುವ ಯೋಜನೆಯಡಿ ಕಳೆದ ವಾರದವರೆಗೆ ಕೇವಲ 287 ಕ್ಲೇಮ್‌ಗಳು ಇತ್ಯರ್ಥವಾಗಿವೆ. ಇದರಲ್ಲಿ 162 ವೈದ್ಯರ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.