ಸಾರಿಗೆ ನೌಕರರ ವಿರುದ್ಧ ಜರುಗಿಸಿದ ಶಿಸ್ತು ಕ್ರಮ ವಾಪಸ್ ಪಡೆಯಿರಿ: ಸಾರಿಗೆ ಒಕ್ಕೂಟ ಮನವಿ
ಬೆಂಗಳೂರು, ಎ.26: ಆರನೆ ವೇತನ ಜಾರಿ ಸೇರಿ ಇತರೆ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರ ವಿರುದ್ಧ ಕೈಗೊಂಡಿದ್ದ ಶಿಸ್ತು ಕ್ರಮವನ್ನು ವಾಪಸ್ಸು ತೆಗೆದುಕೊಳ್ಳುವಂತೆ ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಹೆಚ್.ವಿ.ಅನಂತಸುಬ್ಬರಾವ್ ಅವರು ಸಾರಿಗೆ ಇಲಾಖೆಯ ನಾಲ್ಕು ನಿಗಮ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.
ಫೆಡರೇಷನ್‍ನವರು 2019 ಡಿ.31ರಂದು ಸಾರಿಗೆ ಇಲಾಖೆಗೆ ಬೇಡಿಕೆ ಈಡೇರಿಕೆಗಾಗಿ ಸಲ್ಲಿಸಿರುವ ಮನವಿಯನ್ನು ಚರ್ಚೆ ಮಾಡಿ, ಅದರಂತೆ ಕೈಗಾರಿಕಾ ಒಪ್ಪಂದಕ್ಕೆ ಬರಬೇಕು. ಅಲ್ಲದೆ, ಈ ಒಪ್ಪಂದವನ್ನು ನ್ಯಾಯಾಧೀಕರಣದ ಮುಂದೆ ಸಲ್ಲಿಸಿದರೆ, ಸಮ್ಮತಿಯ ಅಂತಿಮ ತೀರ್ಪುನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮನವಿ ಪತ್ರದಲ್ಲಿ ಅನಂತಸುಬ್ಬರಾವ್ ಅವರು ಉಲ್ಲೇಖಿಸಿದ್ದಾರೆ.
ಸಾರಿಗೆ ನಿಗಮಗಳಲ್ಲಿ ಹರಡಿರುವ ಅಸಮಾಧಾನದ ವಾತಾವರಣವನ್ನು ಪ್ರಯತ್ನ ಪೂರ್ವಕವಾಗಿ ಬದಲಾಯಿಸಿ ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಕಾರ್ಮಿಕರು ಕೆಲಸ ಮಾಡುವ ವಾತಾವರಣವನ್ನು ಆಡಳಿತ ವರ್ಗ ಸೃಷ್ಟಿಸಬೇಕು. ಆಡಳಿತ ವರ್ಗ ವೃತ್ತಿಪರವಾಗಬೇಕು. ಈ ದಿಕ್ಕಿನಲ್ಲಿ ಗುರುತರವಾದ ಜವಾಬ್ದಾರಿ ಆಡಳಿತ ವರ್ಗದ ಮೇಲಿದೆ ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರ ಮೂಲವೇತನಕ್ಕೆ ಶೇ.20ರಷ್ಟು ಹೆಚ್ಚು ಮಾಡಿ ಹೊಸ ವೇತನ ಒಪ್ಪಂದ ಮಾಡಬೇಕು. ಅಲ್ಲದೆ, ಸುಮಾರು 25 ವರ್ಷಗಳಿಂದ ಸತತವಾಗಿ ಎಲ್ಲ ಹಂತಗಳಲ್ಲೂ ಆಡಳಿತ ವರ್ಗ ನೌಕರರ ಮತ್ತು ಕಾರ್ಮಿಕ ಸಂಘ ಸ್ನೇಹಿ ವಾತಾವರಣ ನಿರ್ಮಿಸಲು ವಿಫಲವಾಗಿದೆ. ಹೀಗಾಗಿಯೇ ಆಡಳಿತ ವರ್ಗವನ್ನು ವಿರೋಧಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದರು ಎಂದು ಹೇಳಿದ್ದಾರೆ.
ತಮ್ಮ 37 ವರ್ಷದ ಸೇವೆಯಲ್ಲಿ ಎರಡು ಬಾರಿ ಅಪಘಾತ ರಹಿತ ಸೇವೆಗೆ ಮುಖ್ಯಮಂತ್ರಿ ಅವರಿಂದ ಚಿನ್ನದ ಪದಕ ಪಡೆದಿದ್ದು, ಇನ್ನೂ ಕೆಲವೇ ತಿಂಗಳು ಸೇವೆ ಬಾಕಿ ಇದ್ದ ನಬೀ ರಸುಲ್ಲಾ ಕೆ. ಅವಟಿ ಅವರು ಕರ್ತವ್ಯದಲ್ಲಿ ಇದ್ದಾಗಲೇ ಕೂಟದ ಕಾರ್ಯಕರ್ತರ ಕಲ್ಲುಗಳಿಗೆ ಬಲಿಯಾದರು. ಹಲವು ಕಡೆಗಳಲ್ಲಿ ಸಾರಿಗೆ ನಿಗಮದ ಬಸ್‍ಗಳಿಗೆ ಕಲ್ಲು ತೂರಾಡಿ ಸಂಸ್ಥೆಗೆ ನಷ್ಟ ಮಾಡಲಾಗಿದ್ದು, ಈ ಎಲ್ಲ ಗುಂಡಾಗಿರಿಗಳನ್ನು ನಾವು ನೇರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಈಗ ಹೈಕೋರ್ಟ್ ಆದೇಶದಂತೆ ಕೂಟದ ನಾಯಕತ್ವವು ಮುಷ್ಕರವನ್ನು ವಾಪಸ್ ತೆಗೆದುಕೊಂಡಿದೆ. ಆಡಳಿತ ವರ್ಗ ಇದು ತನ್ನ ಜಯ ಎಂದು ತಿಳಿದುಕೊಳ್ಳಬಾರದು. ಅಲ್ಲದೆ, ಆಡಳಿತ ವರ್ಗ ಏನು ಮಾಡಿದರೂ ಕಾರ್ಮಿಕರು ಅದು ತಮ್ಮ ಕರ್ಮ ಎಂದು ಸುಮ್ಮನೆ ಕುಳಿತುಕೊಳ್ಳುತ್ತಾರೆ ಎಂಬ ಮನಸ್ಥಿತಿಯಲ್ಲಿ ಇರಬಾರದು ಎಂದು ಅನಂತಸುಬ್ಬರಾವ್ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.







