ಕೊರೋನ ಸೋಂಕು ಉಲ್ಬಣ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮುಂದೂಡಿಕೆ
ಬೆಂಗಳೂರು, ಎ.26: ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ನಡೆಸಲು ಉದ್ದೇಶಿಸಿದ್ದ ಚುನಾವಣೆಯನ್ನು ಸರಕಾರ ಮುಂದೂಡಿ ಆದೇಶ ಹೊರಡಿಸಿದೆ.
ಬೆಂಗಳೂರು ಸೇರಿ ರಾಜ್ಯಾದ್ಯಂತ ಕೊರೋನ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯನ್ನು ಮುಂದೂಡಿ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.
ಪರಿಷತ್ತು ಚುನಾವಣೆ ಮತದಾನದ ಅಂತಿಮ ಪ್ರಕ್ರಿಯೆ ಸಾಗಿದೆ. ಆದರೆ ಕೊರೋನ ಹೆಚ್ಚಳ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಚುನಾವಣೆ ನಡೆಸುವುದು ಕಷ್ಟ ಸಾಧ್ಯ. ಹೀಗಾಗಿ ಪ್ರಕ್ರಿಯೆ ಎಲ್ಲಿಗೆ ನಿಂತಿದೆಯೋ ಮುಂದೆ ಅಲ್ಲಿಂದಲೇ ಚುನಾವಣೆ ನಡೆಯಲಿದೆ ಅಲ್ಲಿತನಕ ಮುಂದೂಡಲಾಗಿದೆ ಎಂದು ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ ವೆಂಕಟಸ್ವಾಮಿ ಆದೇಶದಲ್ಲಿ ತಿಳಿಸಿದ್ದಾರೆ.
ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದೆ. ಜೊತೆಗೆ ಕರ್ಫ್ಯೂ ಇರುವುದರಿಂದ ಚುನಾವಣಾ ಮುಂದೂಡಿಕೆ ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಎಲ್ಲಿಂದ ನಿಂತಿದೆಯೋ ಅಲ್ಲಿಂದ ಮುಂದುವರಿಯಲಿದೆ ಎಂದೂ ಕೂಡ ಆದೇಶದಲ್ಲಿ ತಿಳಿಸಿದ್ದಾರೆ.





