ಚಮೋಲಿ ಹಿಮಪ್ರವಾಹ : ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಡೆಹ್ರಾಡೂನ್: ಭಾರತ- ಚೀನಾ ಗಡಿಯ ಸಮೀಪ ಚಮೋಲಿಯದ ನೀತಿ ಕಣಿವೆಯಲ್ಲಿ ಕಳೆದ ವಾರ ಸಂಭವಿಸಿದ ಹಿಮಪ್ರವಾಹದಲ್ಲಿ ಮೃತಪಟ್ಟ ನಾಲ್ಕು ಮಂದಿಯ ಶವಗಳನ್ನು ಭಾರತೀಯ ಸೇನೆ ಪತ್ತೆ ಮಾಡಿದ್ದು, ಒಟ್ಟು ಮೃತರ ಸಂಖ್ಯೆ 15ಕ್ಕೇರಿದಂತಾಗಿದೆ.
"ಎರಡು ದೇಹಗಳು ರವಿವಾರ ರಾತ್ರಿ ಪತ್ತೆಯಾಗಿದ್ದು, ಸೋಮವಾರ ಮತ್ತೆರಡು ದೇಹಗಳನ್ನು ಪತ್ತೆ ಮಾಡಲಾಗಿದೆ. ಚಮೋಲಿ ಪ್ರದೇಶದ ಜೋಶಿಮಠ್‌ಗೆ ಇವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮತ್ತು ಇತರ ವಿಧಿವಿಧಾನಗಳಿಗಾಗಿ ತರಲಾಗಿದೆ. ಶೀಘ್ರವೇ ಮರಣ ಪ್ರಮಾಣಪತ್ರ ನೀಡಲಾಗುವುದು" ಎಂದು ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಭಡೋರಿಯಾ ಹೇಳಿದ್ದಾರೆ.
ಇನ್ನೂ ಕನಿಷ್ಠ ಮೂರರಿಂದ ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ. ಬಿಆರ್‌ಓದಲ್ಲಿ ಕೆಲಸ ಮಾಡುತ್ತಿದ್ದ 384 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಶುಕ್ರವಾರ ಸಂಜೆ ಸುಮಾರು 4ರ ವೇಳೆಗೆ ಗಡಿಭಾಗದಲ್ಲಿ 11 ಸಾವಿರ ಅಡಿ ಎತ್ತರದ ಸುಮ್ನಾ ಪ್ರದೇಶದಲ್ಲಿ ಹಿಮಪ್ರವಾಹ ಸಂಭವಿಸಿತ್ತು. ಗಡಿ ರಸ್ತೆ ಸಂಸ್ಥೆಯ (ಬಿಆರ್‌ಓ) ಹಲವು ಮಂದಿ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ತಕ್ಷಣವೇ ಶೋಧ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಭಾರತೀಯ ಸೇನೆಯ ಕೇಂದ್ರೀಯ ಕಮಾಂಡ್ ಆರಂಭಿಸಿತ್ತು.