ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರುಗಳಿಗೆ ಪಂಚತಾರ ಹೋಟೆಲ್ ನಲ್ಲಿ ಕೋವಿಡ್ ಆರೈಕೆ ಕೇಂದ್ರ

ಹೊಸದಿಲ್ಲಿ: ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶರುಗಳು, ಅಧಿಕಾರಿಗಳು ಮತ್ತವರ ಕುಟುಂಬ ಸದಸ್ಯರುಗಳಿಗಾಗಿ ರಾಜಧಾನಿಯ ಪಂಚತಾರ ಹೋಟೆಲ್ ಒಂದನ್ನು ಕೋವಿಡ್-19 ಆರೈಕೆ ಕೇಂದ್ರವೆಂದು ಗುರುತಿಸಲಾಗಿದೆ.
ಕೇಂದ್ರ ದಿಲ್ಲಿಯ ಅಶೋಕ ಹೋಟೆಲ್‍ನ ನೂರು ಕೊಠಡಿಗಳನ್ನು ಈ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ ಎಂದು ಚಾಣಕ್ಯಪುರಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೀತಾ ಗ್ರೋವರ್ ಆದೇಶವೊಂದರಲ್ಲಿ ತಿಳಿಸಿದ್ದಾರೆ.
ಈ ಪಂಚತಾರ ಹೋಟೆಲ್‍ನಲ್ಲಿ ಪ್ರೈಮಸ್ ಆಸ್ಪತ್ರೆ ಕೋವಿಡ್ ಆರೈಕೆ ಸೇವೆಗಳನ್ನು ಒದಗಿಸಲಿದೆ. ಆಸ್ಪತ್ರೆಯ ಸಿಬ್ಬಂದಿಗೆ ಅಗತ್ಯ ಸುರಕ್ಷಾ ಸಾಧನಗಳು ಹಾಗೂ ತರಬೇತಿಯನ್ನು ನೀಡಲಾಗುವುದು. ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಆಸ್ಪತ್ರೆಯ ಜವಾಬ್ದಾರಿಯಾಗಲಿದೆ. ಇಲ್ಲಿಂದ ಆಗತ್ಯ ಬಿದ್ದರೆ ಸೋಂಕಿತರನ್ನು ಪ್ರೈಮಸ್ ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸೌಕರ್ಯವನ್ನೂ ಒದಗಿಸಲಾಗುವುದು, ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಕೋವಿಡ್ ಆರೈಕೆ ಕೇಂದ್ರದಲ್ಲಿ ತಗಲುವ ವೆಚ್ಚಗಳನ್ನು ಆಸ್ಪತ್ರೆ ಸಂಗ್ರಹಿಸಿ ನಂತರ ಹೋಟೆಲ್‍ಗೆ ಪಾವತಿಸಲಿದೆ. ಆದರೆ ಆಸ್ಪತ್ರೆ ತನ್ನ ವೈದ್ಯರು ಹಾಗೂ ಇತರ ಸಿಬ್ಬಂದಿಯನ್ನು ಅವರದ್ದೇ ವೆಚ್ಚದಲ್ಲಿ ಪರಸ್ಪರ ಒಪ್ಪಿಗೆಯಾದ ದರಗಳಿಗೆ ಹೋಟೆಲ್‍ನಲ್ಲಿ ಇರಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.