ದಕ್ಷಿಣ ಕನ್ನಡ ಜಿ.ಪಂ. ಜನಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯ: ಆಡಳಿತಾಧಿಕಾರಿ ನೇಮಕ
ಮಂಗಳೂರು, ಎ.27: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಪಂಚಾಯತ್‌ನ ಚುನಾಯಿತ ಅವಧಿ ಇಂದು ಮುಕ್ತಾಯಗೊಂಡಿದೆ. ಇದರೊಂದಿಗೆ 5 ವರ್ಷಗಳ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಎ. 28ರಿಂದ ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಆಡಳಿತಾಧಿಕಾರಿಯಾಗಿ ಪೊನ್ನುರಾಜ್ ಅವರು ಕಾರ್ಯ ನಿರ್ವಹಿಸಲಿದ್ದಾರೆ.
ರಾಜ್ಯದಲ್ಲಿ 2016ರ ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು . ಜಿಲ್ಲೆಯಲ್ಲಿ ಫೆ.20 ರಂದು ಚುನಾವಣೆ ನೆರವೇರಿ ಫೆ.23 ರಂದು ಮತ ಎಣಿಕೆ ನಡೆದಿತ್ತು. ಎ.28 ರಂದು ಚುನಾಯಿತ ಸದಸ್ಯರ ಪ್ರಥಮ ಸಭೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಿತ್ತು.
ಜಿ.ಪಂ.ಹಾಗೂ ತಾ.ಪಂ. ಚುನಾಯಿತ ಅವಧಿ 5 ವರ್ಷಗಳಾಗಿದ್ದು ಪ್ರಥಮ ಸಭೆ ನಡೆದ ದಿನದಿಂದ ಅಧಿಕಾರ ಅವಧಿ ಗಣನೆಗೆ ಬರುತ್ತದೆ. ದ.ಕ.ಜಿಲ್ಲಾ ಪಂಚಾಯತ್ ಒಟ್ಟು 36 ಸದಸ್ಯ ಬಲವನ್ನು ಹೊಂದಿದ್ದು ಇದೀಗ ಪುನರ್‌ವಿಂಗಡನೆಯಲ್ಲಿ 42ಕ್ಕೇರಿದೆ. ಚುನಾಯಿತ ಜನಪ್ರತಿನಿಧಿ ಗಳ ಅಧಿಕಾರಾವಧಿ ಮುಕ್ತಾಯದ ಬಳಿಕ ಸರಕಾರದಿಂದ ನೇಮಕಗೊಳ್ಳುವ ಆಡಳಿತಾಧಿಕಾರಿಗಳ ಸುಪರ್ದಿಗೆ ಆಡಳಿತ ಬರುತ್ತದೆ.
ಸಾಮಾನ್ಯಾಗಿ ಜಿಲ್ಲಾ ಪಂಚಾಯತ್‌ನ ಚುನಾಯಿತ ಅವಧಿ ಮುಕ್ತಾಯಗೊಳ್ಳುವುದರೊಳಗೆ ಚುನಾವಣೆ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಸಿದ್ಧತೆಗಳನ್ನು ಕೂಡಾ ಆರಂಭಿಸಿತ್ತು. ಜಿಲ್ಲಾ ಪಂಚಾಯತ್, ತಾಲೂಕು ಕ್ಷೇತ್ರಗಳ ಪುನರ್‌ವಿಂಗಡನೆ ಕಾರ್ಯ ನಡೆದು ಹೊಸ ಕ್ಷೇತ್ರಗಳ ಹೆಸರು ಈಗಗಲೇ ಪ್ರಕಟಗೊಂಡಿದೆ, ಕ್ಷೇತ್ರವಾರು ಮತದಾರರ ಸಂಖ್ಯೆ ನಿಗದಿ ಕಾರ್ಯವೂ ಮುಗಿದಿದ್ದು ಕ್ಷೇತ್ರವಾರು ಮೀಸಲಾತಿ ನಿಗದಿ ಮಾತ್ರ ಬಾಕಿಯುಳಿದಿತ್ತು. ಆದರೆ ಇದೀಗ ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಚುನಾವಣೆಗಳನ್ನು ಆರು ತಿಂಗಳು ನಡೆಸದಿ ರಲು ರಾಜ್ಯ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಕನಿಷ್ಠ 6 ತಿಂಗಳು ವಿಳಂಬವಾಗುವ ಸಾಧ್ಯತೆಗಳಿವೆ.
ಉತ್ತಮ ಆಡಳಿತಕ್ಕೆ ಸಹಕಾರ ದೊರಕಿದೆ: ಮೀನಾಕ್ಷಿ ಶಾಂತಿಗೋಡು
ದ.ಕ. ಜಿಲ್ಲಾ ಪಂಚಾಯತ್‌ನ ಐದು ವರ್ಷಗಳ ಆಡಳಿತ ಉತ್ತಮವಾಗಿ ಕೊನೆಗೊಂಡಿದೆ. ಆಡಳಿತ ಪಕ್ಷ ಹಾಗೂ ವಿಪಕ್ಷದ ಸದಸ್ಯರೆಲ್ಲರೂ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಹೀಗಾಗಿ ನಮ್ಮ ಜಿಲ್ಲಾ ಪಂಚಾಯತ್ ರಾಷ್ಟ್ರ ಮಟ್ಟದಲ್ಲೂ ಗುರುತಿಸುವಂತಾಗಿದೆ. ಸಂಸದರು, ಸಚಿವರು, ಶಾಸಕರು ಮಾತ್ರವಲ್ಲದೆ, ಅಧಿಕಾರಿಗಳು, ಸಿಬ್ಬಂದಿಯಿಂದಲೂ ಉತ್ತಮ ಸಹಕಾರ ದೊರಕಿದೆ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಭಿಪ್ರಾಯಿಸಿದ್ದಾರೆ.







