ಪ್ರಯಾಣಿಕರ ಬೆಲೆಬಾಳುವ ಸೊತ್ತು ಮರಳಿಸಿದ ಕೊಂಕಣ ರೈಲ್ವೆ ಸಿಬ್ಬಂದಿ

ಉಡುಪಿ, ಎ.27: ಮತ್ಸಗಂಧ ರೈಲಿನಲ್ಲಿ ಮುಂಬಯಿಯಿಂದ ಮುಲ್ಕಿಗೆ ಪ್ರಯಾಣಿಸುತಿದ್ದ ಪ್ರಯಾಣಿಕರು ಮರೆತು ರೈಲಿನಲ್ಲಿ ಬಿಟ್ಟು ಹೋಗಿದ್ದ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗೊಂದನ್ನು ಕೊಂಕಣ ರೈಲ್ವೆ ಸಿಬ್ಬಂದಿಗಳು ಮರಳಿಸುವ ಮೂಲಕ ತಮ್ಮ ಸೇವಾ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ರೈಲು ನಂ.02619ರಲ್ಲಿ ಎ.26ರಂದು ಪ್ರಯಾಣಿಸಿದ ಮುಲ್ಕಿಯ ವೆಂಕಟೇಶ್ ಶೆಟ್ಟಿ ಇವರು ಇಳಿಯುವಾಗ ಚಿನ್ನದ ಆಭರಣ, ಸಾವಿರಾರು ರೂ.ನಗದು ಹಾಗೂ ಮಹತ್ವದ ದಾಖಲೆಗಳಿರುವ ಬ್ಯಾಗೊಂದನ್ನು ಮರೆತು ಮೂಲ್ಕಿ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಬ್ಯಾಗ್‌ನಲ್ಲಿ 12ಗ್ರಾಂ ತೂಕದ ಚಿನ್ನದ ಬಳೆ, 25,300ರೂ.ನಗದು ಹಾಗೂ ದಾಖಲೆಗಳಿದ್ದವು.
ಕೆಲ ಹೊತ್ತಿನ ಬಳಿಕ ತಾನು ಬ್ಯಾಗ್ ರೈಲಿನಲ್ಲೇ ಮರೆತು ಬಂದಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಸ್ಟೇಶನ್ ಮಾಸ್ಟರ್‌ಗೆ ವಿಷಯ ತಿಳಿಸಿದರು. ಅವರಿಂದ ಮಾಹಿತಿ ಪಡೆದ ರೈಲಿನಲ್ಲಿದ್ದ ಟಿಕೇಟ್ ಪರಿವೀಕ್ಷಕ (ಟಿಟಿಇ) ಪಿಎಸ್‌ಟಿ ಬಾಬು, ರೈಲಿನಲ್ಲಿ ತಪಾಸಣೆ ನಡೆಸಿ ಬ್ಯಾಗ್‌ನ್ನು ಪತ್ತೆ ಹಚ್ಚಿ ಮಂಗಳೂರಿನ ಪ್ರಾದೇಶಿಕ ಸಾರಿಗೆ ವ್ಯವಸ್ಥಾಪಕರ ಕಚೇರಿಗೆ ಅದನ್ನು ಒಪ್ಪಿಸಿದರು.
ಬಳಿಕ ಪ್ರಾದೇಶಿಕ ಸಾರಿಗೆ ವ್ಯವಸ್ಥಾಪಕರು ಗುರುತು ಖಚಿತಪಡಿಸಿಕೊಂಡು ಪ್ರಯಾಣಿಕ ವೆಂಕಟೇಶ್ ಶೆಟ್ಟಿ ಅವರಿಗೆ ಬ್ಯಾಗ್‌ನ್ನು ಹಸ್ತಾಂತರಿಸಿದರು.







