ಕೊರೋನ ರೋಗಿಗಳಿಗೆ ಚಿಕಿತ್ಸೆ ಪ್ರಕ್ರಿಯೆ ಪಾರದರ್ಶಕವಾಗಿರಲಿ: ಮುಖ್ಯಮಂತ್ರಿಗೆ ನಟ ಜಗ್ಗೇಶ್ ಮನವಿ

ಬೆಂಗಳೂರು, ಎ.27: ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ. ಸಾರ್ ಯಾವ ಕೊರೋನ ರೋಗಿ ಅಡ್ಮಿಟ್ ಆದ 2/3 ದಿನಕ್ಕೆ ಸಾವು ಸಂಭವಿಸುತ್ತಿದೆ(ಸ್ವಂತ ಅನುಭವ), ಯಾವ ಚಿಕಿತ್ಸೆ ನೀಡುತ್ತಾರೆಂದು ಬಂಧುಗಳಿಗೆ ಹೊರಗೆ ತಿಳಿಯದು, ಸಾವಾಗಿದೆ ಎಂದು ತಿಳಿಸುತ್ತಾರೆ. ಮುಖ ಕೂಡ ನೋಡಲಾಗದು. ಬೆರೆಳೆಣಿಸುವ ಕೆಲ ಸಿಬ್ಬಂದಿ ಹೊರತುಪಡಿಸಿ ವಿಷಯ ತಿಳಿಯಲು ತಜ್ಞರು ವೈಯಕ್ತಿಕವಾಗಿ ಸಿಗುವುದಿಲ್ಲ ಎಂದು ಹಿರಿಯ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರತಿ ರೋಗಿಯ ಮನೆಯವರಿಗೆ ಸುರಕ್ಷತಾ ವಿಧಾನಗಳನ್ನು ಅನುಸರಿಸುವ ಮೂಲಕ ದೂರದಿಂದ ನೋಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುತ್ತಿಲ್ಲ. ಪ್ರತಿ ಕೋವಿಡ್ ರೋಗಿಗೆ ಚಿಕಿತ್ಸೆ ಯಾವ ವಿಧಾನ ಇರುತ್ತದೆ, ಎದೆಯ ಸಿಟಿ ಸ್ಕ್ಯಾನ್, ಸೋಂಕು ನಿರ್ವಹಣಾ ಹಂತ, ಸೋಂಕಿನ ಮೊದಲು ಹಾಗೂ ನಂತರ, ಅಂತಿಮವಾಗಿ ಎಲ್ಲ ಹಂತಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ..
ಇದು ಯಾವುದು ಇಲ್ಲದೆ ಅಡ್ಮಿಟ್ ಮಾಡಿಕೊಂಡು ನಂತರ ಯಾವುದೇ ವಿಷಯ ಹೊರಗೆ ತಿಳಿಸದೆ ರೋಗಿಯ ಸಾವಿನ ಜೊತೆ ಮನೆಯವರು ಸಾಯುವಂತೆ ಟೆನ್ಷನ್. ಒಳ ಅರಿವಿರದವರು ಸರಕಾರದ ಕಾರ್ಯ ಶ್ರಮ ದೂಷಣೆ ಮಾಡಿ ಸತ್ಯ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ದಯಮಾಡಿ ರೋಗಿಯನ್ನು ನಿರ್ವಹಣೆ ಮಾಡುವ ಕುರಿತು ವೈದ್ಯ ಹಾಗೂ ಬಂಧುಗಳಿಗೆ ತಿಳಿಯುವಂತೆ ಪಾರದರ್ಶಕ ವ್ಯವಸ್ಥೆ ಆಗಲಿ ಎಂದು ಮುಖ್ಯಮಂತ್ರಿಗೆ ಜಗ್ಗೇಶ್ ಮನವಿ ಮಾಡಿದ್ದಾರೆ.





