ಚುನಾವಣಾ ರ್‍ಯಾಲಿ, ಕುಂಭಮೇಳದಿಂದ ಕೊರೋನ ಹೆಚ್ಚಾಗಿದೆ ಎಂಬುದು ಸುಳ್ಳು: ಸಂಸದೆ ಶೋಭಾ

ಚಿಕ್ಕಮಗಳೂರು, ಎ.27: ಚುನಾವಣೆ ರ್‍ಯಾಲಿ, ಕುಂಭಮೇಳ ಕೋವಿಡ್ ಸೋಂಕು ಹೆಚ್ಚಳ ವಾಗಲು ಕಾರಣವಲ್ಲ. ಚುನಾವಣಾ ರ್‍ಯಾಲಿ, ಕುಂಭಮೇಳದಿಂದ ಕೊರೋನ ಹೆಚ್ಚಾಗಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಘೋಷಣೆ ಮಾಡಿದ್ದು ಚುನಾವಣಾ ಆಯೋಗ. ಚುನಾವಣಾ ರ್‍ಯಾಲಿಯಲ್ಲಿ ಎಲ್ಲಾ ಪಕ್ಷದವರು ಭಾಗಿಯಾಗಿದ್ದಾರೆ. ಚುನಾವಣೆ ಇಲ್ಲದ ರಾಜ್ಯಗಳಲ್ಲೂ ಕೊರೋನ ಜಾಸ್ತಿಯಾಗಿದೆ. ಕುಂಭಮೇಳದಲ್ಲಿ ರಾಜ್ಯದ ಕೆಲವೇ ಮಂದಿ ಭಾಗವಹಿಸಿದ್ದು, ರ್‍ಯಾಲಿ, ಕುಂಭಮೇಳದಿಂದ ಕೊರೋನ ಹೆಚ್ಚಾಗಿದೆ ಎಂಬುದು ಸುಳ್ಳು ಎಂದರು.
ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಡವರ ಜೀವನ ನಿರ್ವಹಣೆಗೆ ಹಣ ನೀಡುವಂತೆ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಬಡವರಿಗೆ ವ್ಯಾಕ್ಸಿನ್‍ಅನ್ನು ಉಚಿತವಾಗಿ ನೀಡುತ್ತಿದೆ. ಈ ಹಿಂದೆ ಲಾಕ್‍ಡೌನ್ ಸಂದರ್ಭದಲ್ಲಿ ಕೇಂದ್ರ ಸರಕಾರ ಜನ್‍ಧನ್ ಖಾತೆಗೆ ಹಣ ಹಾಕಿದೆ. ಅಕ್ಕಿ, ಗೋಧಿಯನ್ನು ಉಚಿತವಾಗಿ ನೀಡಿದೆ. ಸರಕಾರ ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಕೋವಿಡ್ ನಿಯಮ ಪಾಲನೆಯೊಂದಿಗೆ ಕೆಲಸ ನಿರ್ವಹಣೆಗೆ ಅವಕಾಶ ನೀಡಿದೆ. ಕಟ್ಟಡ ಕಾರ್ಮಿಕರಿಗೆ ಔಷಧ, ಊಟ ಉಪಹಾರ, ಆಸ್ಪತ್ರೆ ವ್ಯವಸ್ಥೆಯನ್ನು ಕಟ್ಟಡ ಮಾಲಕರೇ ಜವಬ್ದಾರಿ ವಹಿಸಿಕೊಳ್ಳಬೇಕೆಂದು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು.
ಸೋಂಕಿತರ ಅನುಕೂಲಕ್ಕೆ ಹೆಲ್ಪ್ ಲೈನ್ ಹೆಚ್ಚಳ ಮಾಡಬೇಕು. ರೆಮ್‍ಡೆಸಿವಿರ್, ಆಕ್ಸಿಜನ್, ಹಾಸಿಗೆ ಎಷ್ಟು ಖಾಲಿ ಇದೆ ಎಂದು ಸರಕಾರ ಜನತೆಗೆ ತಿಳಿಸಬೇಕು ಎಂದು ಸರಕಾರಕ್ಕೆ ಪತ್ರ ಬರೆದಿದ್ದೇನೆ. ಕಾಯಿಲೆಯು ಬಿಜೆಪಿ, ಜೆಡಿಎಸ್, ಕಾಂಗ್ರೆಸ್‍ನವರು ಎಂದು ಬರುವುದಿಲ್ಲ. ನಾವು ಪಕ್ಷ, ಧರ್ಮ ನೋಡದೆ ಎಲ್ಲಾರಿಗೂ ಸಹಾಯ ಮಾಡುತ್ತಿದ್ದೇವೆ ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳ ಕೀಳು ರಾಜಕೀಯಕ್ಕೆ ದೇವರೇ ಬುದ್ಧಿ ಕಲಿಸಬೇಕು ಎಂದರು.
ಕೊರೋನ ನಿಯಂತ್ರಣದ ಹಿನ್ನೆಲೆಯಲ್ಲಿ ಸರಕಾರ ಲಾಕ್‍ಡೌನ್ ಮತ್ತು ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಶಾಲಾ, ಕಾಲೇಜನ್ನು ಬಂದ್ ಮಾಡಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ವರ್ಷಗಳನ್ನು ಕಳೆದುಕೊಂಡಿದ್ದಾರೆ. ವ್ಯವಸ್ಥೆಯಲ್ಲಿ ಆರೋಪ ಪ್ರತ್ಯಾರೋಪ ಸಹಜ. ಈಗ ಜನರ ಪ್ರಾಣ ಮುಖ್ಯವೇ ಹೊರತು ಆರೋಪ ಪ್ರತ್ಯಾರೋಪವಲ್ಲ ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಹೇಳಿದರು.







