ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಪ್ರತಿಯೊಬ್ಬ ಮುಸ್ಲಿಮನ ಜವಾಬ್ದಾರಿ: ಡಾ.ಅಬ್ದುಲ್ ಹಕೀಂ ಅಝ್ಹರಿ
"ಕುಂಭಮೇಳದಲ್ಲಿ ಜನಸ್ತೋಮವಿದೆ, ನಮಗೇಕೆ ಸಾಧ್ಯವಿಲ್ಲವೆಂದು ತರ್ಕಿಸುವ ಸಂದರ್ಭ ಇದಲ್ಲ"

Photo: Facebook
"ವಿನಾಶದ ಕಡೆಗೆ ಜಾರಿ ಹೋಗದಂತೆ ಮುಸಲ್ಮಾನರು ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದು ಪ್ರತಿಯೊಬ್ಬ ಮುಸ್ಲಿಮನ ಜವಾಬ್ದಾರಿ ಕೂಡಾ ಹೌದು. ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಜಾರಿಗೊಳಿಸಿರುವ ಎಲ್ಲಾ ನಿಯಮಾವಳಿಗಳನ್ನು ಪಾಲಿಸಲು ಪ್ರತಿಯೊಬ್ಬ ಮುಸ್ಲಿಮನೂ ಬಾಧ್ಯಸ್ಥನಾಗಿರುತ್ತಾನೆ. ಮುಸ್ಲಿಮನು ಯಾವತ್ತೂ ಮುಂದಾಲೋಚನೆಯಿಂದ ವರ್ತಿಸಬೇಕು. ಕೋವಿಡ್ ಸಾಂಕ್ರಾಮಿಕ ರೋಗದ ಈ ಎರಡನೇ ಅಲೆ ತೀವ್ರವಾಗಿರುವಾಗ ನಾವು ಇನ್ನಷ್ಟು ಎಚ್ಚರಿಕೆಯಿಂದ ವರ್ತಿಸಬೇಕಾದ ಅನಿವಾರ್ಯತೆ ಇದೆ" ಎಂದು ಮರ್ಕಝ್ ನಾಲೆಜ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಬ್ದುಲ್ ಹಕೀಂ ಅಝ್ಹರಿ ಹೇಳಿಕೆ ನೀಡಿದ್ದಾರೆ.
"ಸಮಾಜದ ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ, ವಿವಿಧ ಕ್ಷೇತ್ರಗಳ ಪರಿಣತ ತಜ್ಞರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಮಾನದಂಡಗಳನ್ನು ವಿಧಿಸಿದೆ. ಹಾಗಾಗಿ ಮನೆ, ಕಛೇರಿ ಅಥವಾ ಹೊರಗೆ ಪ್ರಯಾಣಿಸುವ ಹಾಗೂ ಇನ್ನಿತರ ಯಾವುದೇ ಸಂದರ್ಭಗಳಲ್ಲಿಯೂ ಸರ್ಕಾರದ ಈ ಮಾನದಂಡಗಳನ್ನು ನಿಖರವಾಗಿ ಪಾಲಿಸಲೇಬೇಕು. ಈ ಮಾನದಂಡಗಳು, ನಿಯಮಾವಳಿಗಳು ವೈಯಕ್ತಿಕವಾಗಿ ಬಾಲಿಷವೆಂದು ನಿಮಗನಿಸಿದರೂ, ಸಾರ್ವಜನಿಕ ಒಳಿತನ್ನು ಗಮನದಲ್ಲಿಟ್ಟು ಇವುಗಳನ್ನು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ವರ್ತಿಸಬಾರದು. ಸಾರ್ವಜನಿಕವಾಗಿ ನಿಯಮಗಳು ರೂಪುಗೊಂಡ ಬಳಿಕ ನಿಮ್ಮ ವೈಯಕ್ತಿಕ ದೃಷ್ಟಿಕೋನದ ಸರಿ/ತಪ್ಪುಗಳ ಜಿಜ್ಞಾಸೆಯನ್ನು ಹರಡಬಾರದು ಎಂದು ಅವರು ಹೇಳಿದರು.
"ಯಾವುದೇ ಬಿಕ್ಕಟ್ಟಿನಲ್ಲೂ ಬದುಕುವ ಅವಕಾಶವನ್ನು ಇಸ್ಲಾಂ ನೀಡಿದೆ. ಹಾಗಿಯೇ ಶುದ್ಧೀಕರಣದ ವಿಷಯದಲ್ಲಿ ನೀರು, ನೀರಿನ ಅಭಾವ ಇರುವಲ್ಲಿ ಮಣ್ಣು, ಅದೂ ಇಲ್ಲದಿದ್ದರೆ ಪ್ರಕೃತಿಯಲ್ಲಿ ಲಭ್ಯವಿರುವ ಇನ್ನಿತರ ಯಾವುದೇ ಸಂಪನ್ಮೂಲಗಳನ್ನು ಬಳಸುವಂತಹ ಅವಕಾಶಗಳನ್ನು ಇಸ್ಲಾಂ ಒದಗಿಸಿದೆ. ಆ ಮೂಲಕ ಪ್ರತಿ ಸಂಧರ್ಭದಲ್ಲೂ ಅದಕ್ಕೆ ಅನುಗುಣವಾಗಿ ಜೀವಿಸುವ, ಆರಾಧನಾ ಕ್ರಮಗಳನ್ನು ಪಾಲಿಸಲು ಇಸ್ಲಾಂ ಕಲಿಸುತ್ತದೆ. ಇದು ಇಸ್ಲಾಮಿನ ವಿಶೇಷತೆ ಹಾಗೂ ಸೌಂದರ್ಯ ಕೂಡಾ ಹೌದು" ಎಂದವರು ಹೇಳಿದರು.
ಸ್ಥಳೀಯ ಆಡಳಿತ ಮಸೀದಿಗಳ ವಿಧಿ ನಿಯಮ- ಆಚಾರ ವಿಚಾರದ ಬಗ್ಗೆ ಸಂಪೂರ್ಣ ಅರಿವಿಲ್ಲದೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಗೌರವಪೂರ್ವಕವಾಗಿ ಅಧಿಕಾರಿಗಳಿಗೆ ತಿಳಿಸಿಕೊಡಬಹುದು. ಅದಕ್ಕೆ ಲಭ್ಯವಿರುವ ಮಾರ್ಗಗಳ ಮೂಲಕ ಸಭ್ಯತೆಯಿಂದ ಚರ್ಚಿಸಬಹುದು. ಆದರೆ, ಕಠಿಣ ಭಾಷಾ ಪ್ರಯೋಗಗಳ ಮೂಲಕ ಟೀಕಿಸುವುದು, ಅಪಪ್ರಚಾರ ನಡೆಸುವುದು ನಮಗೆ ಸೂಕ್ತವಾದುದಲ್ಲ. ಇದರಿಂದ ಇಸ್ಲಾಂ ಮತ್ತು ಮುಸ್ಲಿಮರ ಕುರಿತು ಅನಗತ್ಯ ವಿವಾದ ಹಾಗೂ ಗೊಂದಲದ ವಾತಾವರಣ ನಿರ್ಮಾಣ ಸೃಷ್ಟಿಯಾಗಲು ಮಾತ್ರ ಸಾಧ್ಯ. ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದರು, ಹಾಗಾಗಿ ನಾವು ಸಾವಿರ ಸಂಖ್ಯೆಯಲ್ಲಿ ಸೇರಬಹುದು ಎಂಬ ತರ್ಕ ಹೂಡುವ ಸಂದರ್ಭವೂ ಅಲ್ಲ, ಸನ್ನಿವೇಶವೂ ಅಲ್ಲ. ಬೇರೆಯವರು ನಿಯಮ ಪಾಲಿಸುವುದಿಲ್ಲ ಎನ್ನುವುದು ನಾವು ನಿಯಮ ಪಾಲಿಸದಿರಲು ನಮಗೆ ಸಿಗುವ ಕಾರಣವಾಗಬಾರದು. ಇದೊಂದು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ. ಇಲ್ಲಿ ನಾವು ಮಾದರಿಯಾಗಿ ನಿಲ್ಲಬೇಕು ಎಂದು ಡಾ. ಅಬ್ದುಲ್ ಹಕೀಂ ಅಝ್ಹರಿ ಸಲಹೆ ನೀಡಿದರು.
ಸಾಮಾನ್ಯವಾಗಿ ಆರಾಧನೆ, ಪ್ರಾರ್ಥನೆ ಮಾಡುವ ಒಬ್ಬ ವ್ಯಕ್ತಿಗೆ ಪ್ರಾರ್ಥನೆ ಅಥವಾ ಆರಾಧನೆ ಮಾಡಲು ಮನಸ್ಸಿದ್ದರೂ ರೋಗ ಅಥವಾ ಇನ್ಯಾವುದೇ ಅಂತಹ ಕಾರಣಗಳಿಂದಾಗಿ ಆರಾಧನೆ ನಡೆಸಲು ಸಾಧ್ಯವಾಗದಿದ್ದರೂ ಆ ವ್ಯಕ್ತಿಗೆ ಆರಾಧನೆಯ ಪೂರ್ಣ ಪ್ರತಿಫಲ ಲಭಿಸುವುದೆಂದು ಪ್ರವಾದಿ ಮುಹಮ್ಮದ್ ರವರು ಕಲಿಸಿಕೊಟ್ಟಿದ್ದಾರೆ. ಹಾಗಾಗಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದರ ಮೂಲಕ ಆಧ್ಯಾತ್ಮಿಕವಾಗಿ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.