ವಿಕಲಚೇತನರಿಗೆ ಕೊರೋನ ಲಸಿಕೆ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಎ.27: ವಿಕಲಚೇತನರಿಗೆ ಕೊರೋನ ಲಸಿಕೆ ನೀಡಬೇಕು ಹಾಗೂ ಸೆಕ್ಷನ್ 25ರ ಪ್ರಕಾರ ಉಚಿತ ಆರೋಗ್ಯ ರಕ್ಷಣೆ ಮಾಡಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಈ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ.
ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡು, ಲಸಿಕೆ ಹಾಕಿಸಿಕೊಳ್ಳುವಂತೆ ವಿಕಲಚೇತನರಿಗೆ ಮನವಿ ಮಾಡಬೇಕು. ಜತೆಗೆ ಖುದ್ದಾಗಿ ಮನೆಗೆ ತೆರಳಿ ವಿಕಲಚೇತನರಿಗೆ ಲಸಿಕೆ ಹಾಕಿ ಎಂದು ಸೂಚಿಸಿದೆ.
ವಿಕಲಚೇತನರ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 8ರ ಪ್ರಕಾರ ತುರ್ತು ಪರಿಸ್ಥಿತಿ ವಿಕೋಪಗಳ ಸಂದರ್ಭದಲ್ಲಿ ಸಮಾನ ರಕ್ಷಣೆ ಮತ್ತು ಸುರಕ್ಷತೆ ಇರಬೇಕು. ಸೆಕ್ಷನ್ 25ರ ಪ್ರಕಾರ ಉಚಿತ ಆರೋಗ್ಯ ರಕ್ಷಣೆ, ತಡೆಮುಕ್ತ ಪ್ರವೇಶ, ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ವಿಕಲಚೇತನರಿಗೆ ಮತ್ತು ಅವರಿಗೆ ಆರೈಕೆ ಮಾಡುವವರಿಗೆ ಕಡ್ಡಾಯವಾಗಿ ಲಸಿಕೆ ನೀಡುವಂತೆ ̧ಸೂಚನೆ ನೀಡಬೇಕು ಎಂದು ಅರ್ಜಿದಾರರು ಪೀಠಕ್ಕೆ ಮನವಿ ಮಾಡಿದರು. ಜೊತೆಗೆ ಕೊರೋನ ಲಸಿಕೆಗಾಗಿ ಸಾಲು ಸಾಲಾಗಿ ನಿಲ್ಲುವುದನ್ನು ತಪ್ಪಿಸಿ ಎಂದು ತಿಳಿಸಿದೆ.





