ಭ್ರಷ್ಟ ಅಧಿಕಾರಿಗಳಿಂದಾಗಿ ನನ್ನ ತಮ್ಮ ಕೋಮಲ್ಗೆ ಕೋವಿಡ್: ನಟ ಜಗ್ಗೇಶ್

Photos: Facebook
ಬೆಂಗಳೂರು, ಎ.27: ಕೆಲ ಲಂಚಬಾಕ ಬಿಬಿಎಂಪಿ ಅಧಿಕಾರಿಗಳಿಂದಾಗಿ ನನ್ನ ತಮ್ಮ ಕೋಮಲ್ಗೆ ಕೋವಿಡ್ ಸೋಂಕಿಗೆ ಒಳಗಾದ. ಈ ಸಮಯದಲ್ಲಿ ಆತನನ್ನು ಉಳಿಸಿಕೊಳ್ಳಲು ನಾನು ಪಟ್ಟ ಯಾತನೆ ಆ ದೇವರಿಗೆ ಗೊತ್ತೆಂದು ನಟ ಜಗ್ಗೇಶ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚಿತ್ರರಂಗದ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಬಿಬಿಎಂಪಿಯಲ್ಲಿ ಸ್ವಂತ ವ್ಯವಹಾರ ಪ್ರಾರಂಭಿಸಿ ಯಶಸ್ವಿಯೂ ಆದ. ಆದರೆ, ಇತ್ತೀಚೆಗೆ ಆತನಿಗೆ ಬಿಬಿಎಂಪಿ ಕಡೆಯಿಂದ ಬರಬೇಕಾದ ಬಾಕಿ ಹಣಕ್ಕಾಗಿ ಅಧಿಕಾರಿಗಳು ಸತಾಯಿಸಿದರು. ಈ ವೇಳೆ ಕೋಮಲ್ ನಿರಂತರವಾಗಿ ಬಿಬಿಎಂಪಿಗೆ ಓಡಾಟ ಮಾಡಿದ ಕಾರಣಕ್ಕಾಗಿ ಕೊರೋನ ಸೋಂಕಿಗೆ ತುತ್ತಾದ ಎಂದು ತಿಳಿಸಿದ್ದಾರೆ.
ನನ್ನ ತಮ್ಮ ಕೋಮಲ್ ಆರೋಗ್ಯ ಕೊರೋನ ಸೋಂಕಿನಿಂದ ತುಂಬಾ ಗಂಭೀರ ಸ್ಥಿತಿಗೆ ತಲುಪಿತ್ತು. ನನ್ನ ತಮ್ಮನಿಗೆ ಸಾವನ್ನು ಗೆಲ್ಲುವ ಶಕ್ತಿ ನೀಡಿಯೆಂದು ದೇವರಲ್ಲಿ ಪ್ರಾರ್ಥಿಸಿದೆ. ಕೊನೆಗೂ ಅಣ್ಣನಾಗಿ ನನ್ನ ತಮ್ಮನನ್ನು ಉಳಿಸಿಕೊಂಡೆ. ಈ ವೇಳೆ ಸಹಾಯ ಮಾಡಿದ ಡಾ.ಲಲಿತಾ, ಮಧುಮತಿ ಹಾಗೂ ನರ್ಸ್ಗಳಿಗೆ ನನ್ನ ನಮನಗಳೆಂದು ತಿಳಿಸಿದ್ದಾರೆ.





