ಕೋವಿಡ್ ಕರ್ಫ್ಯೂ ಹಿನ್ನೆಲೆ: ಮಂಗಳೂರಿನಿಂದ ಊರಿಗೆ ಹೊರಟ ವಲಸೆ ಕಾರ್ಮಿಕರು

ಮಂಗಳೂರು, ಎ.27: ನಗರ ಸಹಿತ ಜಿಲ್ಲೆಯ ಪ್ರಮುಖ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ‘ಕೋವಿಡ್ ಕರ್ಫ್ಯೂ’ನಿಂದ ಆತಂಕಗೊಂಡ ತವರೂರಿನತ್ತ ಹೊರಟು ಹೋಗುತ್ತಿರುವ ದೃಶ್ಯ ಮಂಗಳವಾರ ನಗರದಲ್ಲಿ ಕಂಡು ಬಂದಿದೆ.
ನಗರದ ರೈಲು ನಿಲ್ದಾಣ ಮತ್ತು ಬಿಜೈ ಸರಕಾರಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ತವರೂರಿನತ್ತ ತೆರಳಲು ತವಕಿಸುತ್ತಿದ್ದರು. ಇನ್ನೂ ಎರಡು ವಾರ ಲಾಕ್‌ಡೌನ್ ಇದೆ. ಈ ಎರಡು ವಾರದಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ನಾವು ಕುಟುಂಬ ಸಮೇತವಾಗಿ ಊರಿಗೆ ಹೊರಟಿದ್ದೇವೆ ಎಂದು ಗದಗ ಜಿಲ್ಲೆಯ ಮಂಜಪ್ಪ ಎಂಬವರು ಹೇಳಿದರು. ರಾಜ್ಯದ ಇತರ ಜಿಲ್ಲೆಗಳಿಂದ ವಲಸೆ ಬಂದವರಲ್ಲದೆ ಹೊರರಾಜ್ಯದ ವಲಸೆ ಕಾರ್ಮಿಕರು ಕೂಡ ಭವಿಷ್ಯದ ಹಿತದೃಷ್ಟಿಯಿಂದ ತವರೂರಿನತ್ತ ಮುಖ ಮಾಡಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಸಂಜೆಯವರೆಗೂ ಬಸ್ ಮತ್ತು ರೈಲು ನಿಲ್ದಾಣಗಳತ್ತ ಕಾರ್ಮಿಕರು ಹೆಜ್ಜೆ ಹಾಕುತ್ತಿದ್ದುದು ಕಂಡು ಬಂತು.
ಕಟ್ಟಡ ನಿರ್ಮಾಣ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ. ಕೋವಿಡ್-19 ನಿಯಮ ಪಾಲಿಸಿ ಕಾಮಗಾರಿ ಮಾಡಬಹುದಾಗಿದೆ. ಈಗಾಗಲೆ ನಾವು ಕ್ರೆಡೈ, ಬಿಲ್ಡರ್ಸ್ ಅಸೋಸಿಯೇಶನ್, ಕೈಗಾರಿಕೋದ್ಯಮಿಗಳ ಸಭೆ ಕರೆದು ಕಾರ್ಮಿಕರ ಬಗ್ಗೆ ಅದರಲ್ಲೂ ವಲಸೆ ಕಾರ್ಮಿಕರ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದೇವೆ. ಸಾಧ್ಯವಾದರೆ ಕಾಮಗಾರಿ ನಡೆಯುವ ಸ್ಥಳದಲ್ಲೇ ವಸತಿ, ಆಹಾರದ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.
ಜಿಲ್ಲೆಯಿಂದ ಯಾರೂ ವಲಸೆ ಕಾರ್ಮಿಕರು ತವರೂರಿನತ್ತ ಹೊರಟು ಹೋದ ಬಗ್ಗೆ ನಮಗೆ ಯಾವುದೇ ಮಾಹಿತಿ ಅಥವಾ ದೂರು ಬಂದಿಲ್ಲ. ಈಗಾಗಲೆ ಕೇಂದ್ರ ಕಾರ್ಮಿಕ ಇಲಾಖೆಯು ಈ ಬಗ್ಗೆ ನಮ್ಮಿಂದ ವರದಿಯನ್ನೂ ಕೇಳಿದೆ. ಆದರೆ, ಜಿಲ್ಲೆಯಿಂದ ಯಾರೂ ವಲಸ ಹೊರಟು ಹೋದ ಬಗ್ಗೆ ತಿಳಿದಿಲ್ಲ ಎಂದು ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ ತಿಳಿಸಿದ್ದಾರೆ.









