ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ಕೊರೋನ ಕರ್ಫ್ಯೂ ಜಾರಿ
ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗಷ್ಟೆ ಅವಕಾಶ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ. 27: ಕೊರೋನ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕಾಗಿ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6ಗಂಟೆಯ ವರೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರಕಾರ ಹೇರಿರುವ `ಕೊರೋನ ಕರ್ಫ್ಯೂ' ಜಾರಿಗೆ ಬಂದಿದ್ದು, ಬೆಳಗ್ಗೆ 6ರಿಂದ 10 ಗಂಟೆಯ ವರೆಗೆ ಮಾತ್ರ ಹಾಲು, ತರಕಾರಿ, ಮಾಂಸ, ಮೊಟ್ಟೆ, ದಿನಸಿ ಸಹಿತ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಲಾಗಿದೆ.
ಉತ್ಪಾದನಾ ವಲಯ, ನಿರ್ಮಾಣ ಕ್ಷೇತ್ರ, ಕೃಷಿ ಚಟುವಟಿಕೆಗಳು, ಆಸ್ಪತ್ರೆ, ಹಾಲು, ಪೇಪರ್ ಸೇರಿ ಅಗತ್ಯ ಸೇವೆ, ರೈಲು, ವಿಮಾನ ಸೇವೆಯನ್ನು ಹೊರತುಪಡಿಸಿದರೆ ಇತರೆ ಎಲ್ಲ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. 15 ದಿನಗಳ ದೀರ್ಘಾವಧಿಯ ಲಾಕ್ಡೌನ್ ಮಾದರಿಯ ಕೊರೋನ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಇತರೆ ನಗರಗಳಿಂದ ದೊಡ್ಡಸಂಖ್ಯೆಯಲ್ಲಿ ಕಾರ್ಮಿಕರು, ದಿನಗೂಲಿ ನೌಕರರು, ಬಡ-ಮಧ್ಯಮ ವರ್ಗದ ಜನರು ಕೊನೆಯ ಕ್ಷಣದಲ್ಲಿ ನಗರಗಳನ್ನು ತಮ್ಮ ಊರುಗಳಿಗೆ ತೆರಳಿದರು.
ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ, ಖಾಸಗಿ ಬಸ್, ಆಟೋರಿಕ್ಷಾ, ಟ್ಯಾಕ್ಸಿ, ಕ್ಯಾಬ್ ಸಹಿತ ಯಾವುದೇ ಸಾರಿಗೆ ಸಂಚಾರ ಇನ್ನು ಹದಿನಾಲ್ಕು ದಿನಗಳ ಕಾಲ ಇರುವುದಿಲ್ಲ. ಹೀಗಾಗಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಸಿನಿಮಾ ಮಂದಿರ, ಶಾಪಿಂಗ್ ಮಾಲ್ಗಳು, ದೇವಸ್ಥಾನ, ಚರ್ಚ್, ಮಸೀದಿ, ಯೋಗ ಕೇಂದ್ರಗಳು, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು ಸೇರಿ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಮುಚ್ಚಲಿವೆ.
ಜನ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು: `ಇಂದು ರಾತ್ರಿಯಿಂದಲೇ ಕೊರೋನ ಕರ್ಫ್ಯೂ ಆರಂಭವಾಗಿದ್ದು, 14 ದಿನಗಳ ಕಾಲ ಜನತೆ ತಮ್ಮಷ್ಟಕ್ಕೆ ತಾವೇ ಸ್ವಯಂ ನಿಯಂತ್ರಣ ಮಾಡಿಕೊಂಡರೆ ಕೊರೋನ ಸೋಂಕನ್ನು ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನರ ಸಂಪೂರ್ಣ ಸಹಕಾರವನ್ನು ಸರಕಾರ ಬಯಸುತ್ತದೆ' ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸರಕಾರ ಕೈಗೊಂಡಿರುವ ಈ ಬಿಗಿ ಕ್ರಮಗಳನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ರಾಜ್ಯದ ಜನರ ಮೇಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಕೊರೋನ ನಿಯಂತ್ರಿಸಲು ಬಿಗಿ ಕ್ರಮ ಕೈಗೊಳ್ಳುವ ನಿರ್ಧಾರ ಜಾರಿಗೊಳಿಸಲಾಗಿದೆ. ಈ ಬಿಗಿ ಕ್ರಮಕ್ಕೆ ಜನ ಸ್ವಯಂ ಪ್ರೇರಣೆಯಿಂದ ಸ್ಪಂದಿಸಬೇಕಾದ ಅವಶ್ಯಕತೆಯಿದೆ. ಸ್ವಯಂ ನಿಯಂತ್ರಣದಲ್ಲಿಯೆ ಕೊರೋನ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯ' ಎಂದು ಹೇಳಿದರು.
ಇನ್ನೂ 14 ದಿನಗಳ ಕಾಲ ರಾಜ್ಯದ ಪ್ರತಿಯೊಬ್ಬ ನಾಗರಿಕರು ಅತ್ಯಂತ ಹೆಚ್ಚು ಜಾಗೃತರಾಗಿರಬೇಕು. ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಬಹಳ ಮುಖ್ಯ ಎಂಬುದನ್ನು ಮನಗಾಣಬೇಕು. ರಾಜ್ಯ ಸರಕಾರ ಹೇರಿರುವ ನಿರ್ಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಅವಶ್ಯವಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೊರೋನ ಕರ್ಫ್ಯೂ ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ನೆರೆಯ ಮಹಾರಾಷ್ಟ್ರ ಸರಕಾರ ಬಿಗಿ ಕ್ರಮ ಕೈಗೊಂಡಿದೆ. ಹೀಗಾಗಿ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಗಿ ಕ್ರಮದ ತೀರ್ಮಾನ ಮಾಡಿದ್ದಾರೆ. ಸರಕಾರದ ನಿಯಮಗಳನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಕರ್ಫ್ಯೂ ಸಂದರ್ಭದಲ್ಲಿ ವಿನಾಕಾರಣ ಹೊರಗೆ ಓಡಾಡುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಉದ್ದೇಶಪೂರ್ವಕವಾಗಿ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡುವ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜಧಾನಿ ಬೆಂಗಳೂರು ನಗರದಲ್ಲಿ ಮಾತ್ರ ತುರ್ತು ಅಗತ್ಯ ಸೇವೆಗಳಿಗಾಗಿ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಕೆಲ ಬಸ್ಸುಗಳ ವ್ಯವಸ್ಥೆಯನ್ನು ಮಾಡುತ್ತೇವೆ. ಔಷಧ, ಆಸ್ಪತ್ರೆ, ತರಕಾರಿ ಸೇರಿದಂತೆ ಅಗತ್ಯದ ಕೆಲಸಕ್ಕೆ ಹೋಗುವವರಿಗೆ ನಿಯಮಿತವಾಗಿ ಕೆಲ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು'
-ಬಸವರಾಜ ಬೊಮ್ಮಾಯಿ, ಗೃಹ ಸಚಿವ
ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಿಸಲು ತಜ್ಞರ ಸಲಹೆಯಂತೆ 14 ದಿನಗಳ ಕಾಲ ಕೋವಿಡ್ ಕರ್ಫ್ಯೂ ವಿಧಿಸಲಾಗಿದ್ದು, ಈ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಕೊರೋನ ಹಿಮ್ಮೆಟ್ಟಿಸಲು ಸಹಕರಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ'
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಅವಕಾಶ
ಆರೋಗ್ಯ ಸೇವೆ, ಆಸ್ಪತ್ರೆ, ಔಷಧಾಲಯಗಳು, ಉತ್ಪಾದನಾ ವಲಯ(ಗಾರ್ಮೆಂಟ್ಸ್ ಹೊರತುಪಡಿಸಿ), ನಿರ್ಮಾಣ ಕಾಮಗಾರಿ, ಕೃಷಿ ಚಟುವಟಿಕೆ, ಕೋವಿಡ್ ಕರ್ತವ್ಯ, ಅಗತ್ಯ ಸೇವೆಗಳ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ, ಅಂತರರಾಜ್ಯ ಸರಕು ಸಾಗಾಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿಮಾನ, ರೈಲ್ವೆ ಟಿಕೆಟ್ ಇದ್ದವರಿಗೆ ಬಸ್, ರಿಕ್ಷಾಗಳಲ್ಲಿ ಸಂಚಾರಕ್ಕೆ ಅನುಮತಿ. ಹೊಟೇಲ್ ಮತ್ತು ಮದ್ಯಂಗಡಿ ಪಾರ್ಸಲ್ಗಷ್ಟೇ ಅವಕಾಶ ನೀಡಲಾಗಿದೆ.
ನಿರ್ಬಂಧ
ಸಾರಿಗೆ ಸಂಚಾರ, ಟ್ಯಾಕ್ಸಿ, ಕ್ಯಾಬ್, ರಿಕ್ಷಾ, ಸಿನಿಮಾ ಮಂದಿರ, ಶಾಪಿಂಗ್ ಮಾಲ್ಗಳು, ದೇವಸ್ಥಾನ, ಚರ್ಚ್, ಮಸೀದಿ, ಯೋಗ ಕೇಂದ್ರಗಳು, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು, ಅಂಗಡಿ-ಮುಂಗಟ್ಟುಗಳಿಗೆ ನಿರ್ಬಂಧ ಹೇರಲಾಗಿದೆ.







