ಕೋವಿಡ್ ಸಂಕಷ್ಟ: ಆರ್ಥಿಕ ಪ್ಯಾಕೇಜ್ ಘೋಷಣೆಗೆ ಡಿ.ಕೆ.ಶಿವಕುಮಾರ್ ಒತ್ತಾಯ

ಬೆಂಗಳೂರು, ಎ.27: ರಾಜ್ಯ ಸರಕಾರವು ಏಕಾಏಕಿ ಲಾಕ್‍ಡೌನ್ ಘೋಷಣೆ ಮಾಡಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅಧ್ಯಕ್ಷತೆಯಲ್ಲಿ ಝೂಮ್ ಮೂಲಕ ನಡೆದ ಕಾಂಗ್ರೆಸ್ ಪ್ರಮುಖ ನಾಯಕರ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರ ಈ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಬದಲು ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿದ್ದ ಪಡಿತರ ಅಕ್ಕಿ ಪ್ರಮಾಣವನ್ನು ಎರಡು ಕೆ.ಜಿ.ಗೆ ಇಳಿಸಿದೆ. ಇದಕ್ಕಿಂತ ದುರಂತ ಬೇರೊಂದು ಇಲ್ಲ. ನಮಗೆ ನಾಚಿಕೆ ಆಗುತ್ತಿದೆ. ಇವರೇನು ಇವರ ಕೈಯಿಂದ ಕೊಡುತ್ತಿದ್ದಾರಾ ಅಕ್ಕಿಯನ್ನು ಎಂದು ಅವರು ಕಿಡಿಗಾರಿದರು.
ಕೋವಿಡ್ ಸಂದರ್ಭದಲ್ಲಿ ನಾವು ಯಾವ ರೀತಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಅನೇಕ ಸಲಹೆಗಳು ಬಂದಿವೆ. ಪ್ರಮುಖವಾಗಿ ರೋಗಿಗಳಿಗೆ ಯಾವ ರೀತಿ ಸಹಾಯ ಮಾಡಬೇಕು, ಆಸ್ಪತ್ರೆ ಹಾಗೂ ಸಾಮಾನ್ಯ ಜನರಿಂದ ಯಾವ ರೀತಿ ಮಾಹಿತಿ ಪಡೆದುಕೊಳ್ಳಬೇಕು. ಕೋವಿಡ್ ಸೋಂಕಿತರ ಶವಸಂಸ್ಕಾರಕ್ಕೆ ಯಾವ ರೀತಿ ನೆರವುನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ಬ್ಲಾಕ್ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಏನೇನು ಜವಾಬ್ದಾರಿ ವಹಿಸಿಕೊಳ್ಳಬೇಕು. ನಾವು ಕೊಟ್ಟಿರುವ ಸಲಹೆಗಳ ಆಧಾರದಲ್ಲಿ ಸರಕಾರ ಕೈಗೊಂಡಿರುವ ತೀರ್ಮಾನಗಳೇನು? ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೀಡಿದ ಸಲಹೆಯಂತೆ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳೇನು ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಇವತ್ತಿನ ಸಭೆಯಲ್ಲಿ 51 ಜನ ನಾಯಕರು ಪಾಲ್ಗೊಂಡಿದ್ದರು. 37 ಜನರ ಬಳಿ ಸಲಹೆ ಪಡೆದಿದ್ದೇವೆ. ಉಳಿದವರ ಜೊತೆ ನಾನು ಮಾತನಾಡುತ್ತೇನೆ. ಈಗಾಗಲೆ ರಾಜ್ಯಮಟ್ಟದಲ್ಲಿ ಕೋವಿಡ್ ಸೆಂಟರ್ ಆರಂಭಿಸಿದ್ದೇವೆ. ಕೋವಿಡ್ ಸೋಂಕಿತರಿಗೆ ಅಗತ್ಯ ಮಾರ್ಗದರ್ಶನ, ಸಲಹೆ ನೀಡಲು 24/7 ವೈದ್ಯರು ಲಭ್ಯವಿರುವಂತೆ ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.
ಕೆಪಿಸಿಸಿ, ಮಹಿಳಾ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಎಲ್ಲ ಸೇರಿ ಒಗ್ಗಟ್ಟಿನಿಂದ ಈ ಸಂಕಷ್ಟದ ಸಮಯದಲ್ಲಿ ಕಾರ್ಯಕ್ರಮ ರೂಪಿಸುತ್ತೇವೆ. ಖಾಸಗಿ ಆಸ್ಪತ್ರೆಗಳಿಗೆ ಸಮರ್ಪಕವಾದ ರೀತಿಯಲ್ಲಿ ಔಷಧಗಳು ಸರಬರಾಜು ಆಗುತ್ತಿಲ್ಲ. ಈ ವಿಚಾರದಲ್ಲಿ ಔಷಧ ನಿಯಂತ್ರಕರಿಂದ ತಾರತಮ್ಯ ಆಗುತ್ತಿದೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಕಳೆದ ವರ್ಷ ಯಾವ ರೀತಿ ಸಹಾಯ ಮಾಡಲಾಗಿತ್ತೋ ಅದೇ ರೀತಿ ಈ ಬಾರಿಯು ನೆರವು ನೀಡಲು ಉದ್ದೇಶಿಸಲಾಗಿದೆ. ಈಗ ಸರಕಾರದ ವಿರುದ್ಧ ಹೋರಾಟ ಮಾಡುವ ಸಮಯಲ್ಲ, ಜನರಿಗೆ ಸಹಾಯ ಮಾಡುವ ಸಮಯ. ಜನರ ಜೊತೆಯಲ್ಲಿ ಅವರ ಬದುಕಿನ ಜೊತೆಯಲ್ಲಿದ್ದು ಅವರ ಆರೋಗ್ಯ ಕಾಪಾಡಿಸಿ, ಜೀವ ಉಳಿಸಲು ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.







