ಕೊರೋನ ವೈರಸ್ ನ ಭಾರತೀಯ ಪ್ರಭೇದ ಪತ್ತೆ: ಕೋವಿಡ್ ಸುನಾಮಿ ಅಲೆಯ ಭೀತಿಯಲ್ಲಿ ಫಿಜಿ

ಸುವ (ಫಿಜಿ), ಎ. 27: ಫಿಜಿ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕವು ವ್ಯಾಪಕವಾಗಿ ಹಬ್ಬಿದ್ದು, ಇದು ಭಾರತೀಯ ರೂಪಾಂತರಿತ ಪ್ರಭೇದವಾಗಿದೆ ಎನ್ನುವುದು ಮಂಗಳವಾರ ದೃಢಪಟ್ಟಿದೆ. ಇದರೊಂದಿಗೆ, ಕೊರೋನ ಪ್ರಕರಣಗಳ ಸುನಾಮಿ ಏಳುವ ಭಯ ಉಂಟಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ಸುವದಲ್ಲಿ ಈಗಾಗಲೇ ಲಾಕ್ಡೌನ್ ಘೋಷಿಸಲಾಗಿದೆ.
ಒಂದು ವರ್ಷದವರೆಗೆ ಕೊರೋನ ವೈರಸನ್ನು ದೂರವಿಡುವಲ್ಲಿ ಫಿಜಿ ಯಶಸ್ವಿಯಾಗಿದೆಯಾದರೂ, ಈ ತಿಂಗಳಿನಲ್ಲಿ ನಡಿ ಎಂಬ ಪಟ್ಟಣದಲ್ಲಿರುವ ಕ್ವಾರಂಟೈನ್ ಕೇಂದ್ರದ ಸುತ್ತ ಹಲವಾರು ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಪಟ್ಟಣದಲ್ಲಿ ಫಿಜಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
ಕ್ವಾರಂಟೈನ್ ಕೇಂದ್ರಗಳಲ್ಲಿ ಮಂಗಳವಾರ ಆರು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಪೆಸಿಫಿಕ್ ಸಾಗರದಲ್ಲಿರುವ ದ್ವೀಪರಾಷ್ಟ್ರದ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳ ಕಾರ್ಯದರ್ಶಿ ಜೇಮ್ಸ್ ಫೊಂಗ್ ತಿಳಿಸಿದರು. ಭಾರತದಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಕೊರೋನ ವೈರಸ್ನ ಹೊಸ ಪ್ರಭೇದ ಒಡ್ಡಿರುವ ಬೆದರಿಕೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
‘‘ಭಾರತದಲ್ಲಿ ಸಂಭವಿಸುತ್ತಿರುವ ದುರಂತಗಳು ಫಿಜಿಯಲ್ಲಿ ನಡೆಯಲು ಅವಕಾಶ ನೀಡಲು ಸಾಧ್ಯವಿಲ್ಲ’’ ಎಂದು ಟೆಲಿವಿಶನ್ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ನುಡಿದರು. 9.30 ಲಕ್ಷ ಜನಸಂಖ್ಯೆಯಿರುವ ಫಿಜಿಯಲ್ಲಿ ಈವರೆಗೆ 109 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ ಹಾಗೂ ಕೇವಲ ಎರಡು ಸಾವುಗಳು ಸಂಭವಿಸಿವೆ.







