ಉಡುಪಿ ಜಿಲ್ಲೆಗೆ 12,000 ಡೋಸ್ ಕೋವಿಶೀಲ್ಡ್ ಲಸಿಕೆ
ಉಡುಪಿ, ಎ.27: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಗೆ ಕೊರತೆಯುಂಟಾಗಿದ್ದು, ಇದರಿಂದ ಸಾಕಷ್ಟು ಮಂದಿ ಲಸಿಕೆ ಸಿಗದೆ ಅನಿವಾರ್ಯವಾಗಿ ಬರಿಗೈಲಿ ಮರಳಿದ್ದರು. ಎರಡನೇ ಲಸಿಕೆಗಾಗಿ ಬಂದ ಸಾಕಷ್ಟು ಮಂದಿ ಹಿರಿಯ ನಾಗರಿಕರು ಇದರಿಂದ ತೊಂದರೆಗೂ ಒಳಗಾಗಿದ್ದರು. ಇಂದು ಅಪರಾಹ್ನದ ವೇಳೆ ಜಿಲ್ಲೆಗೆ 12,000 ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದ್ದು, ಇದರಿಂದ ಮುಂದಿನ ಎರಡು-ಮೂರು ದಿನಗಳ ಕಾಲ ಬಂದವರಿಗೆ ನೀಡಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಲಸಿಕೆಯ ಕೊರತೆಯಿಂದ ಇಂದು ಕೇವಲ 1179 ಮಂದಿಗೆ ಮಾತ್ರ ಲಸಿಕೆ ಪಡೆದಿದ್ದು, ಇವರಲ್ಲಿ 499 ಮಂದಿ ಮೊದಲ ಡೋಸ್‌ನ್ನು 680 ಮಂದಿ ಎರಡನೇ ಡೋಸ್‌ನ್ನೂ ಪಡೆದಿದ್ದರು.
ಜಿಲ್ಲೆಯಲ್ಲಿ 45 ವರ್ಷ ಮೇಲಿನ ಒಟ್ಟು 1161 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 492 ಮಂದಿ ಮೊದಲ ಡೋಸ್‌ನ್ನೂ, 669 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. ಇಂದು 11 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 7 ಮಂದಿ ಕೊರೋನ ಮುಂಚೂಣಿ ಯೋಧರು ಲಸಿಕೆ ಸ್ವೀಕರಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 1,81,104 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 42,447 ಮಂದಿ ಎರಡನೇ ಡೋಸ್‌ನ್ನು ಸ್ವೀಕರಿಸಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.







