ಕೊರೋನ ಸೋಂಕು: ದ.ಕ ಜಿಲ್ಲೆಯಲ್ಲಿ 2ನೇ ಅಲೆಯ ಬಳಿಕ 6 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಮಂಗಳೂರು, ಎ.27: ಕೊರೋನ ಸೋಂಕಿನ ನಿಗ್ರಹಕ್ಕೆ ದ.ಕ.ಜಿಲ್ಲಾಡಳಿತವು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿದೆ. ಆದಾಗ್ಯೂ ಕೊರೋನ ಸೋಂಕಿನ 2ನೆ ಅಲೆಯ ಬಳಿಕ ದ.ಕ.ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದ.ಕ.ಜಿಲ್ಲೆಯಲ್ಲಿ 783 ಮಂದಿ ಆಸ್ಪತ್ರೆ ಹಾಗೂ 3,249 ಮಂದಿ ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಜಿಲ್ಲೆಯಲ್ಲಿ 4816 ಬೆಡ್ಗಳು ಲಭ್ಯವಿದ್ದು, ಈ ಪೈಕಿ 4,033 ಬೆಡ್ ಖಾಲಿ ಇದೆ. ಆಸ್ಪತ್ರೆಯ ಬೆಡ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಮಂಗಳೂರು ಒನ್ ಮೂಲಕ ಸಾಪ್ಟ್ವೇರ್ನಲ್ಲಿ ಸಾರ್ವಜನಿಕರಿಗೆ ನೀಡಲು ಸಿದ್ಧತೆ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದ.ಕ. ಜಿಲ್ಲೆಯಲ್ಲಿ 2 ದಿನಕ್ಕೆ ಬೇಕಾಗುವಷ್ಟು 15 ಸಾವಿರ ಲಸಿಕೆ ಲಭ್ಯವಿದೆ. ಎರಡು ದಿನದೊಳಗೆ ಮತ್ತೆ ಲಸಿಕೆ ಬರಲಿದೆ. ಕರ್ಫ್ಯೂ ಸಂದರ್ಭ ಲಸಿಕೆ ಪಡೆಯಲು ದೂರದ ಪ್ರದೇಶಕ್ಕೆ ಪ್ರಯಾಣಿಸುವ ಬದಲು ತಮ್ಮ ಮನೆಯ ಸುತ್ತ ಮುತ್ತ ಲಭ್ಯವಿರುವಲ್ಲಿ ಲಸಿಕೆ ಪಡೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವವರು ಮೊದಲೇ ಆಸ್ಪತ್ರೆಯ ದೃಢೀಕರಣ ಸಂದೇಶವನ್ನು ಪಡೆದು ಸಂಚರಿಸಲು ಅವಕಾಶವಿದೆ ಎಂದರು.







