ಮೇ, ಜೂನ್‍ನಲ್ಲಿ 5 ಕೆಜಿ ಉಚಿತ ಅಕ್ಕಿ ವಿತರಣೆ: ಆಹಾರ ಇಲಾಖೆ ಆಯುಕ್ತ

ಬೆಂಗಳೂರು, ಎ.27: ಕೋವಿಡ್-19ರ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 2021ರ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಆಹಾರ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಈ ಕುರಿತು ಪ್ರಟಕಣೆ ಹೊರಡಿಸಿರುವ ಅವರು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದಲ್ಲಿನ ಅದ್ಯತಾ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 5ಕೆ.ಜಿ ಆಹಾರ ಧಾನ್ಯವನ್ನು ವಿತರಿಸಬೇಕಾಗಿರುತ್ತದೆ. ಅದರಂತೆ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೆ ಸಹಾಯಧನ (ಸಬ್ಸಿಡಿ) ದರದಲ್ಲಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2.62 ಲಕ್ಷ ಮೆಟ್ರಿಕ್‍ಟನ್ ಭತ್ತ, 4.52 ಲಕ್ಷ ಮೆಟ್ರಿಕ್‍ಟನ್ ರಾಗಿ ಹಾಗೂ 72,238 ಮೆಟ್ರಿಕ್‍ಟನ್ ಜೋಳವನ್ನು ರಾಜ್ಯದ ರೈತರಿಂದ ಖರೀದಿಸಲಾಗಿದೆ. ಸದರಿ ಅಹಾರ ಧಾನ್ಯಗಳನ್ನು ರಾಜ್ಯದಲ್ಲಿಯೇ ಉಪಯೋಗಿಸಿಕೊಳ್ಳಬೇಕಾಗಿದೆ. ಅದರಂತೆ, ರಾಗಿಯನ್ನು ಆಹಾರಧಾನ್ಯವನ್ನಾಗಿ ಉಪಯೋಗಿಸುವ 14 ಜಿಲ್ಲೆಗಳಲ್ಲಿನ ಅದ್ಯತಾ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುವ 5 ಕೆ.ಜಿ ಆಹಾರಧಾನ್ಯದ ಪೈಕಿ 3 ಕೆ.ಜಿರಾಗಿ ಮತ್ತು 2ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಜೋಳದ ಸಂಗ್ರಹಣೆ ಕಡಿಮೆ ಇರುವ ಹಿನ್ನಲೆಯಲ್ಲಿ, ರೈತರಿಂದ ಜೋಳವನ್ನು ಸಂಗ್ರಹಿಸಲಾಗಿರುವ 3 ಜಿಲ್ಲೆಗಳಾದ ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿನ ಪಡಿತರ ಫಲಾನುಭವಿಗಳಿಗೆ 2021 ರ ಮೇ ತಿಂಗಳಿನಲ್ಲಿ 3 ಕೆ.ಜಿ ಜೋಳ ಮತ್ತು 2ಅಕ್ಕಿಯನ್ನು ವಿತರಿಸಲು ಉದ್ದೇಶಿಸಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿನ ಅದ್ಯತಾ ಪಡಿತರ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರಕಾರದ ಪರವಾಗಿ ರಾಜ್ಯದ ರೈತರಿಂದ 18.10 ಲಕ್ಷ ಮೆಟ್ರಿಕ್‍ಟನ್ ಭತ್ತ, 7 ಮೆಟ್ರಿಕ್‍ಟನ್ ರಾಗಿ ಮತ್ತು 6 ಲಕ್ಷ ಮೆಟ್ರಿಕ್‍ಟನ್ ಜೋಳವನ್ನು ಖರೀದಿಸಲು ಕೇಂದ್ರ ಸರಕಾರವು ಅನುಮೋದನೆಯನ್ನು ನೀಡಿದೆ. ಹಾಗೂ ರಾಜ್ಯದಲ್ಲಿ ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ರಾಜ್ಯದಲ್ಲಿನ ಅದ್ಯತಾ ಪಡಿತರ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.







