"ಆಮ್ಲಜನಕ ಕೊರತೆ ಎಂದು ಸುಳ್ಳು ಹೇಳುವ ಆಸ್ಪತ್ರೆಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ"
ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಸೂಚನೆ

ಲಕ್ನೊ, ಎ.27: ಆಮ್ಲಜನಕದ ಕೊರತೆಯಿದೆ ಎಂದು ಸುಳ್ಳು ಹೇಳಿ ಜನರಲ್ಲಿ ಗೊಂದಲ ಮತ್ತು ಗಾಬರಿ ಹುಟ್ಟಿಸುವ ಆಸ್ಪತ್ರೆಗಳ ಆಡಳಿತ ವರ್ಗದ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ)ಯಡಿ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಮ್ಲಜನಕದ ಕೊರತೆಯ ಕುರಿತ ಸುಳ್ಳು ಮತ್ತು ವದಂತಿಯನ್ನು ಬಯಲಿಗೆಳೆಯಲು ಮತ್ತು ಎಲ್ಲಾ ಸಾವಿನ ಪ್ರಕರಣಗಳನ್ನೂ ಆಮ್ಲಜನಕದ ಕೊರತೆ ಎಂದು ಬಿಂಬಿಸುವ ಪ್ರಕರಣಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ರಾಜ್ಯದ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಆಮ್ಲಜನಕ ತಪಾಸಣೆ ನಡೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಆಮ್ಲಜನಕ ತಪಾಸಣೆಯ ನಿಟ್ಟಿನಲ್ಲಿ ಸಾಫ್ಟ್ವೇರ್ ಒಂದನ್ನು ಅಭಿವೃದ್ಧಿಗೊಳಿಸುವ ಕಾರ್ಯದಲ್ಲಿ ಐಐಟಿ ಕಾನ್ಪುರ ಮತ್ತು ಬಿಎಚ್ಯು ನಿರತವಾಗಿದ್ದು ಇದಕ್ಕೆ ಐಐಎಂ ಲಕ್ನೊ ಕೂಡಾ ಕೈಜೋಡಿಸಿದೆ. ರಾಜ್ಯದಲ್ಲಿ ಸಾಕಷ್ಟು ಆಮ್ಲಜನಕದ ದಾಸ್ತಾನಿದೆ. ಆದರೆ ಆಮ್ಲಜನಕದ ಕೊರತೆಯ ಬಗ್ಗೆ ಸುಳ್ಳು ಹರಡುವ ಮೂಲಕ ಸರಕಾರಕ್ಕೆ ಕೆಟ್ಟ ಹೆಸರು ತರುವ ಪಿತೂರಿ ನಡೆಯುತ್ತಿದೆ. ವದಂತಿ ಹಬ್ಬುವವರ ವಿರುದ್ಧ ಎನ್ಎಸ್ಎ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ರೆಮ್ಡೆಸಿವಿರ್ ಲಸಿಕೆಯನ್ನು ಸರಕಾರ ಪೂರೈಸಿದ್ದು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇದನ್ನು ಉಚಿತವಾಗಿ ಒದಗಿಸಬೇಕು. ಲಸಿಕೆಯ ವೆಚ್ಚವನ್ನು ಸರಕಾರ ಭರಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆಮ್ಲಜನಕ ಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಾದಲ್ಲಿ ಆಸ್ಪತ್ರೆಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಮುಖ್ಯ ವೈದ್ಯಾಧಿಕಾರಿಯನ್ನು ಸಂಪರ್ಕಿಸಬಹುದು. ಆಮ್ಲಜನಕ ಪೂರೈಕೆ ಮತ್ತು ಬೇಡಿಕೆಯ ಬಗ್ಗೆ ನಿಗಾ ವಹಿಸಲು ಪ್ರಧಾನ ಕೇಂದ್ರದಲ್ಲಿ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗಿದೆ ಎಂದು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ(ಮಾಹಿತಿ) ನವನೀತ್ ಸೆಹಗಲ್ ಹೇಳಿದ್ದಾರೆ.
ಆಮ್ಲಜನಕ ಪೂರೈಸುವ ಎರಡು ರೈಲುಗಳು ಲಕ್ನೋಗೆ ಆಗಮಿಸಿವೆ ಮತ್ತು ರಸ್ತೆಯ ಮೂಲಕ 5 ಲಾರಿಗಳಲ್ಲಿ ಆಮ್ಲಜನಕದ ಸಿಲಿಂಡರ್ ಬಂದಿದೆ. ತುರ್ತು ಉದ್ದೇಶಕ್ಕಾಗಿ 5,000 ಜಂಬೋ ಆಮ್ಲಜನಕ ಸಿಲಿಂಡರ್ಗಳಿಗೆ ಸರಕಾರ ಬೇಡಿಕೆ ಸಲ್ಲಿಸಿದೆ. ಹೆಚ್ಚುವರಿ ಆಮ್ಲಜನಕ ಪೂರೈಸುವಂತೆ ಟಾಟಾ ಮತ್ತು ರಿಲಯನ್ಸ್ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ನಮ್ಮಲ್ಲಿ ಸಾಕಷ್ಟು ಆಮ್ಲಜನಕದ ದಾಸ್ತಾನು ಇದೆ. ಆಸ್ಪತ್ರೆಗಳು 36 ಗಂಟೆಗೆ ಸಾಕಾಗುವಷ್ಟು ಆಮ್ಲಜನಕದ ದಾಸ್ತಾನು ಇರಿಸಿಕೊಳ್ಳಬೇಕು ಎಂದು ಸೆಹಗಲ್ ಸಲಹೆ ನೀಡಿದ್ದಾರೆ.
ಪ್ರಯಾಗ್ರಾಜ್ ನಲ್ಲಿ ಮುಚ್ಚಲಾಗಿದ್ದ ಭಾರತ್ ಪಂಪ್ಸ್ ಆ್ಯಂಡ್ ಕಂಪ್ರೆಸ್ಸರ್ ಲಿ. ಸಂಸ್ಥೆಯ ಪುನರಾರಂಭಕ್ಕೆ ಸೂಚಿಸಿದ್ದು ಇಲ್ಲಿ ಸಿಲಿಂಡರ್ಗಳನ್ನು ಉತ್ಪಾದಿಸಲಾಗುವುದು ಎಂದವರು ಹೇಳಿದ್ದಾರೆ.







