ಬಡವರು, ಶ್ರಮಿಕರ ನೆರವಿಗೆ ಸರಕಾರ ಧಾವಿಸಬೇಕು: ಮೌಲಾನ ಸಗೀರ್ ಅಹ್ಮದ್ ಖಾನ್
ಬೆಂಗಳೂರು, ಎ.27: ರಾಜ್ಯ ಸರಕಾರವು ಕೋವಿಡ್ ಸಾಂಕ್ರಮಿಕವನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ 14 ದಿನಗಳ ಕೋವಿಡ್ ಕರ್ಫ್ಯೂ ಅನ್ನು ಹೇರಿದೆ. ಈ ಅವಧಿಯಲ್ಲಿ ಸರಕಾರವು ಬಡವರು ಹಾಗೂ ಶ್ರಮಿಕರ ನೆರವಿಗೆ ಧಾವಿಸಬೇಕು ಎಂದು ಅಮಿರೇ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ಆಗ್ರಹಿಸಿದರು.
ಮಂಗಳವಾರ ನಗರದ ಗೋವಿಂದಪುರದಲ್ಲಿರುವ ದಾರೂಲ್ ಉಲೂಮ್ ಸಬೀಲುರ್ರಶಾದ್ (ಅರೇಬಿಕ್ ಕಾಲೇಜು)ನಲ್ಲಿ ‘ಇಮಾರತ್ ಎ ಶರೀಅ’ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ಹೇರಿಕೆ ಮಾಡಿದಾಗ ಬಡವರು, ದಿನಗೂಲಿ ನೌಕರರು, ಶ್ರಮಿಕ ವರ್ಗದವರು ಸೇರಿದಂತೆ ಎಲ್ಲರೂ ಸಂಕಷ್ಟಗಳನ್ನು ಎದುರಿಸಿದ್ದಾರೆ. ಇತ್ತೀಚೆಗಷ್ಟೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರುಳುತ್ತಿದೆ ಎಂದು ಭಾವಿಸುತ್ತಿರುವಾಗಲೇ, ಕೋವಿಡ್ ಎರಡನೆ ಅಲೆಯು ಎಲ್ಲರನ್ನೂ ಕಂಗೆಡಿಸಿದೆ ಎಂದು ಅವರು ಹೇಳಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರಕಾರವು ಈ ವರ್ಗಗಳ ನೆರವಿಗೆ ಧಾವಿಸಬೇಕು. ಅವರಿಗೆ ಅಗತ್ಯವಿರುವ ಪಡಿತರ ಸೇರಿದಂತೆ ಎಲ್ಲ ರೀತಿಯ ನೆರವನ್ನು ನೀಡಬೇಕು. ಜೊತೆಗೆ, ಕೋವಿಡ್ ಸೋಂಕಿನಿಂದ ನರಳುತ್ತಿರುವ ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೇವೆಯನ್ನು ಕಲ್ಪಿಸಿ, ಸಾವು ನೋವುಗಳ ಪ್ರಮಾಣವನ್ನು ತಗ್ಗಿಸಲು ಪ್ರಯತ್ನಿಸಬೇಕು ಎಂದು ಸಗೀರ್ ಅಹ್ಮದ್ ಮನವಿ ಮಾಡಿದರು.
ಮೌಲಾನ ಇಫ್ತಿಖಾರ್ ಅಹ್ಮದ್ ಖಾಸ್ಮಿ ಮಾತನಾಡಿ, ಲಾಕ್‍ಡೌನ್ ಅನ್ನು ಅಂತಿಮ ಅಸ್ತ್ರವನ್ನಾಗಿ ಪ್ರಯೋಗಿಸಬೇಕು. ಅದಕ್ಕಿಂತ ಮುಂಚಿತವಾಗಿ ಬಳಸಬಹುದಾದ ಕ್ರಮಗಳ ಬಗ್ಗೆ ಸರಕಾರ ಹೇಗೆ ವರ್ತಿಸಿದೆ ಎಂಬುದು ಗೊತ್ತಾಗಬೇಕಿದೆ ಎಂದರು.
ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ ಸಿಗುತ್ತಿಲ್ಲ. ಕಳೆದ ವರ್ಷ ಇದೇ ಪರಿಸ್ಥಿತಿ ಇತ್ತು. ಈಗ ಎರಡನೆ ಅಲೆ ಆರಂಭವಾಗಿದೆ. ಈ ಅವಧಿಯಲ್ಲಿ ಸರಕಾರ ಯಾತಕ್ಕಾಗಿ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಪ್ರಯತ್ನಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಕಳೆದ ಬಾರಿಯ ಲಾಕ್‍ಡೌನ್ ಸಂದರ್ಭದಲ್ಲಿ ಮುಸ್ಲಿಮರು ಯಾವ ರೀತಿ ಬಡವರು, ನಿರ್ಗತಿಕರು, ಶ್ರಮಿಕರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಗಳಿಗೆ ನೆರವಿನ ಹಸ್ತ ಚಾಚಿದ್ದರೋ ಅದೇ ರೀತಿ ಈ ಕೋವಿಡ್ ಕರ್ಫ್ಯೂ ಸಂದರ್ಭದಲ್ಲಿಯೂ ತಮ್ಮ ಶಕ್ತಿಯ ಅನುಸಾರ ನೆರವು ನೀಡಬೇಕು ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ಮನವಿ ಮಾಡಿದರು.
ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಇಮಾಮ್ ಮೌಲಾನ ಮಕ್ಸೂದ್ ಇಮ್ರಾನ್ ಮಾತನಾಡಿ, ರಾಜ್ಯದಲ್ಲಿ ಶೇ.60ರಷ್ಟು ಮಂದಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವವರಿದ್ದಾರೆ. ಅವರ ನೆರವಿಗೆ ಸರಕಾರ ಧಾವಿಸಬೇಕು. ಇಲ್ಲದಿದ್ದಲ್ಲಿ, ಅಂತಹ ಕುಟುಂಬಗಳು ಸಾಕಷ್ಟು ಸಮಸ್ಯೆಗಳಿಗೆ ಸಿಲುಕುತ್ತವೆ ಎಂದರು.
ಸಭೆಯಲ್ಲಿ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಮುಫ್ತಿ ಶಂಶುದ್ದಿನ್ ಬಜ್ಲಿ, ಮೌಲಾನ ಆಸಿಮ್ ಅಹ್ಮದ್, ಮೌಲಾನ ವಹೀದುದ್ದೀನ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







