ಪಾರಂಪಳ್ಳಿ ಹೊಳೆಗೆ ಸತ್ತ ಕೋಳಿಯ ತ್ಯಾಜ್ಯ: ಸ್ಥಳೀಯರಿಂದ ಆಕ್ರೋಶ

ಕೋಟ, ಎ.27: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಹೊಳೆಗೆ ಕಿಡಿಗೇಡಿಗಳು ಕೋಳಿ ತ್ಯಾಜ್ಯ ಎಸೆದು ಮಲಿನಗೊಳಿಸಿರುವ ಘಟನೆ ಇಂದು ನಡೆದಿದೆ.
ಸುಮಾರು 10-15 ಸತ್ತ ಕೋಳಿ ಹಾಗೂ ಅದರ ತ್ಯಾಜ್ಯವನ್ನು ಕಿಡಿಗೆಡಿಗಳು ಹೊಳೆಗೆ ಎಸೆದಿದ್ದು, ಇದರಿಂದ ಹೊಳೆ ನೀರು ದುರ್ವಾಸನೆಗಿಡಾಗಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಸಮಸ್ಯೆಯಾಗಿತ್ತು. ‘ಪ್ರತಿದಿನ ಈ ರೀತಿ ಹೊಳೆಗೆ ಕೋಳಿ ತ್ಯಾಜ್ಯ ಹಾಗೂ ಕಸವನ್ನು ತಂದು ಎಸೆದು ಹೋಗುತ್ತಾರೆ. ಆದರೆ ಈ ಬಗ್ಗೆ ಸ್ಥಳೀಯಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯ ಆಶಾ ಕಾರ್ಯಕರ್ತೆ ಶ್ಯಾಮಲ ಪೂಜಾರಿ ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜನ ಪ್ರತಿನಿಧಿ ಅನುಸೂಯ ಆನಂದರಾಮ ಹೇರ್ಳೆ ಹಾಗೂ ರೇಖಾ ಕೇಶವ ಕರ್ಕೇರ ಸಮಸ್ಯೆಗೆ ಸ್ಪಂದಿಸಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಪೌರಕಾರ್ಮಿಕರ ಮೂಲಕ ಹೊಳೆಯಲ್ಲಿದ್ದ ತ್ಯಾಜ್ಯವನ್ನು ತೆರೆವುಗೊಳಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಾದ ವ್ಯಾಪರಸ್ಥರು, ಈ ರೀತಿ ತ್ಯಾಜ್ಯಗಳನ್ನು ಎಸೆದು ಪರಿಸರ ಹಾಳು ಮಾಡುವುದು ಸರಿಯಲ್ಲ. ಪಟ್ಟಣ ಪಂಚಾಯತ್ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ತ್ಯಾಜ್ಯಗಳನ್ನು ಈ ಭಾಗದಲ್ಲಿ ಎಸೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಕಸ ಎಸೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಆಶಾಕಾರ್ಯಕರ್ತೆ ಶ್ಯಾಮಲ ಪೂಜಾರಿ ಒತ್ತಾಯಿಸಿದ್ದಾರೆ.








