ಹಸಿ ಮತ್ತು ಒಣ ಕಸದ ವಿಂಗಡಣೆಗೆ ಸೂಚನೆ
ಮಂಗಳೂರು, ಎ.27: ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆಗಳಿಂದ, ಅಪಾರ್ಟ್‌ಮೆಂಟ್‌ಗಳಿಂದ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಲು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.
ದಿನನಿತ್ಯ ಕೋವಿಡ್-19ರ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಪಾಲಿಕೆಯ ಸಂಸ್ಕರಣಾ ಘಟಕದಲ್ಲಿ ವಿಂಗಡಿಸುವ ಪ್ರಮಾಣವನ್ನು ಕಡಿಮೆ ಮಾಡಲು ನಗರದ ಎಲ್ಲಾ ಮನೆಗಳಿಗೆ, ಅಪಾರ್ಟ್‌ಮೆಂಟ್ಗಳಿಗೆ, ವಾಣಿಜ್ಯ ಸಂಕೀರ್ಣಗಳಿಗೆ, ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಿಗೆ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನಾಗಿಸಿ ವಿಂಗಡಿಸಲು ಪಾಲಿಕೆಯ ಆಯುಕ್ತರು ಕಟ್ಟುನಿಟ್ಟ್ಟಾಗಿ ಸೂಚಿಸಿದ್ದಾರೆ.
ಒಣ ಕಸವನ್ನು ಪ್ರತಿ ಶುಕ್ರವಾರ ಮತ್ತು ಹಸಿ ಕಸವನ್ನು ಪ್ರತಿ ಶುಕ್ರವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಮಹಾನಗರ ಪಾಲಿಕೆಯ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ನೀಡಲು ಸೂಚಿಸಿದೆ. ಈ ಸೂಚನೆಯನ್ನು ಉಲ್ಲಂಘಿಸಿದವರಿಗೆ ಕೆಎಂಸಿ ಅಧಿನಿಯಮ ಹಾಗೂ ಮಹಾನಗರ ಪಾಲಿಕೆಯ
ತ್ಯಾಜ್ಯ ನಿರ್ವಹಣೆಯ ನಿಯಮದಡಿ 1,000ರಿಂದ 25.000 ರೂ.ವರೆಗೆ ದಂಡ ವಿಧಿಸಲಾಗುವುದು.
ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಕಾಂಪೋಸ್ಟಿಂಗ್ ಘಟಕವನ್ನು ಅಳವಡಿಸಿಕೊಂಡಲ್ಲಿ 2021-22ನೇ ಸಾಲಿನ ಆಸ್ತಿ ತೆರಿಗೆಯಲ್ಲಿನ ಘನತ್ಯಾಜ್ಯ ಕರದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಪಾಲಿಕೆಯ ಆರೋಗ್ಯ ವಿಭಾಗದಿಂದ ಪಡೆದುಕೊಳ್ಳಬಹುದು ಎಂದು ಆಯುಕ್ತ ಅಕ್ಷಯ್ ಶ್ರೀಧರ್ ಮನವಿ ಮಾಡಿದ್ದಾರೆ.







