ಕೊರೋನ ಸೋಂಕು ಪ್ರಕರಣಗಳ ದತ್ತಾಂಶ ಮರೆಮಾಚಬೇಡಿ: ಉತ್ತರಪ್ರದೇಶ ಸರಕಾರಕ್ಕೆ ಪ್ರಿಯಾಂಕಾ ಪತ್ರ

ಹೊಸದಿಲ್ಲಿ, ಎ. 26: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಡಿಮೆ ಪರೀಕ್ಷೆ ದರ ಹಾಗೂ ಹಾಸಿಗೆಗಳ ತೀವ್ರ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಆದಿತ್ಯನಾಥ್ ಅವರಿಗೆ 10 ಅಂಶಗಳ ಸಲಹೆಗಳನ್ನು ಒಳಗೊಂಡ ಪತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರಪ್ರದೇಶ ಸರಕಾರ ಎಲ್ಲ ಕೋವಿಡ್ ಆಸ್ಪತ್ರೆಗಳನ್ನು ಮರು ಆರಂಭಿಸಬೇಕು. ರಾಜ್ಯದಲ್ಲಿ ಕೋವಿಡ್ ದತ್ತಾಂಶವನ್ನು ಮರೆಮಾಚಬಾರದು ಎಂದಿದ್ದಾರೆ. ಜೀವ ರಕ್ಷಕ ಔಷಧಗಳು ಹಾಗೂ ಆಮ್ಲಜನಕದ ಕಾಳದಂಧೆಯ ಬಗ್ಗೆ ಕೂಡ ಪ್ರಿಯಾಂಕಾ ಗಾಂಧಿ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಕಡಿಮೆ ಪರೀಕ್ಷೆ ದರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶ ಸರಕಾರ ಕೊರೋನ ಸೋಂಕಿತರ ನಿಜವಾದ ಸಂಖ್ಯೆಯನ್ನು ಘೋಷಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಲಸಿಕೆ ಪ್ರಕ್ರಿಯೆ ತುಂಬಾ ನಿಧಾನವಾಗಿ ಸಾಗುತ್ತಿದೆ. ಇದುವರೆಗೆ 1 ಕೋಟಿಗಿಂತಲೂ ಕಡಿಮೆ ಜನರಿಗೆ ಕೊರೋನ ಲಸಿಕೆ ನೀಲಾಗಿದೆ ಎಂದು ಅವರು ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಹಣಕಾಸು ಪರಿಹಾರ ಪ್ಯಾಕೇಜ್ ನೀಡುವಂತೆ ಪ್ರಿಯಾಂಕಾ ಗಾಂಧಿ ವಾದ್ರಾ ಸಲಹೆ ನೀಡಿದ್ದಾರೆ.