ದಿಲ್ಲಿ: ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ 20 ಗಂಟೆ ಸರದಿಯಲ್ಲಿ ಕಾಯುತ್ತಿರುವ ಕುಟುಂಬಿಕರು

ಹೊಸದಿಲ್ಲಿ, ಎ. 26: ಕೊರೋನ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ದಿಲ್ಲಿಯ ಚಿತಾಗಾರಗಳಲ್ಲಿ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಜನರು 20 ಗಂಟೆಗಳ ಕಾಲ ಸರದಿಯಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ ಎಂದು ವರದಿಯಾಗಿದೆ.
ಇಲ್ಲಿನ ಚಿತಾಗಾರದ ಸಮೀಪ ನೆಲದಲ್ಲಿ, ಪಾರ್ಕ್ ಮಾಡಲಾದ ವಾಹನಗಳಲ್ಲಿ ಮೃತದೇಹಗಳನ್ನು ಇರಿಸಿಕೊಂಡು ಅಂತ್ಯ ಸಂಸ್ಕಾರಕ್ಕೆ ಮೃತರ ಸಂಬಂಧಿಕರು ಕಾಯುತ್ತಿರುವುದು ಕಂಡು ಬಂದಿದೆ. ‘‘ಇಂತಹ ಕೆಟ್ಟ ಪರಿಸ್ಥಿತಿ ನನ್ನ ಬದುಕಿನಲ್ಲಿ ಇದುವರೆಗೆ ನೋಡಿಲ್ಲ. ಜನರು ತಮ್ಮ ಪ್ರೀತಿಪಾತ್ರರ ಮೃತದೇಹದೊಂದಿಗೆ ಸ್ಮಶಾನದಿಂದ ಸ್ಮಶಾನಕ್ಕೆ ಅಲೆಯುತ್ತಿದ್ದಾರೆ.
"ದಿಲ್ಲಿಯ ಸರಿಸುಮಾರು ಎಲ್ಲ ಚಿತಾಗಾರಗಳು ಮೃತದೇಹಗಳಿಂದ ತುಂಬಿದೆ" ಎಂದು ಮೆಸ್ಸಿ ಫ್ಯುನರಲ್ಸ್ ಮಾಲಕ ವಿನೀತಾ ಮೆಸ್ಸಿ ಹೇಳಿದ್ದಾರೆ. ‘‘ಜಾಗವಿಲ್ಲದೇ ಇದ್ದರೆ, ನಾನೇನು ಮಾಡಲಿ? ಮೃತದೇಹವನ್ನು ನಾವು ಇಂದು ಬಾಡಿಗೆ ಶೈತ್ಯಾಗಾರದಲ್ಲಿ ಇರಿಸಿದ್ದೇವೆ’’ ಎಂದು ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕೆ ಸರದಿಯಲ್ಲಿ ಕಾಯುತ್ತಿರುವ ಪಶ್ಚಿಮ ಬಂಗಾಳದ ಅಶೋಕ ನಗರ ಮೂಲದ ಉದ್ಯಮಿ ಅಮನ್ ಅರೋರಾ ಹೇಳಿದ್ದಾರೆ.





