ಆಮ್ಲಜನಕ ತಯಾರಿಕೆಗಾಗಿ ತಮಿಳುನಾಡಿನ ಸ್ಟರ್ಲೈಟ್ ಘಟಕ ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ಸಮ್ಮತಿ
ಹೊಸದಿಲ್ಲಿ, ಎ.27: ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಟಲೈಟ್ ಘಟಕದ ಪುನರಾರಂಭಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸಮ್ಮತಿಸಿದೆ. ದೇಶಕ್ಕೆ ಆಮ್ಲಜನಕದ ಅಗತ್ಯವನ್ನು ಮನಗಂಡು ಆಮ್ಲಜನಕ ಉತ್ಪಾದಿಸಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆದರೆ ಆಮ್ಲಜನಕ ಉತ್ಪಾದಿಸುವ ನೆಪದಲ್ಲಿ ಇಲ್ಲಿ ತಾಮ್ರ ಕರಗಿಸುವ ಪ್ರಕ್ರಿಯೆ ನಡೆಯಬಾರದು ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಸೂಚಿಸಿದೆ ಮತ್ತು ಈ ವಿಷಯದ ಬಗ್ಗೆ ರಾಜಕೀಯ ಮೇಲಾಟ ನಡೆಯಬಾರದು ಎಂದು ತಿಳಿಸಿದೆ.
ವೇದಾಂತ ಸಂಸ್ಥೆಯ ಮಾಲಕತ್ವದಲ್ಲಿರುವ ಸ್ಟರ್ಲೈಟ್ ಘಟಕದಲ್ಲಿ ಆಮ್ಲಜನಕ ಉತ್ಪಾದನೆ ಪ್ರಕ್ರಿಯೆಯ ಬಗ್ಗೆ ನಿಗಾ ಇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮತ್ತು ಟ್ಯುಟಿಕೋರಿನ್ ಪೊಲೀಸ್ ಅಧೀಕ್ಷಕರನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಬೇಕು ಎಂದು ತಮಿಳುನಾಡು ಸರಕಾರಕ್ಕೆ ಸೂಚಿಸಿದೆ. ಆಮ್ಲಜನಕ ಉತ್ಪಾದನೆಯ ಉದ್ದೇಶದಿಂದ ತೂತುಕುಡಿಯ ತಾಮ್ರ ಕರಗಿಸುವ ಘಟಕವನ್ನು 4 ತಿಂಗಳು ಪುನರಾರಂಭಿಸಲು ಅವಕಾಶ ನೀಡಲಾಗಿದೆ. ಆಮ್ಲಜನಕದ ಅಗತ್ಯದ ಆಧಾರದಲ್ಲಿ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ. ನಿಗದಿತ ಅವಧಿಯ ಬಳಿಕ ಆಮ್ಲಜನಕ ಘಟಕಕ್ಕೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಹೇಳಿದ್ದಾರೆ.
ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬ ಸ್ಥಳೀಯರ ವಿರೋಧದಿಂದ 2018ರಲ್ಲಿ ಕಾರ್ಯಸ್ಥಗಿತಗೊಳಿಸಿದ್ದ ತಮಿಳುನಾಡಿನ ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕವನ್ನು ಆಮ್ಲಜನಕ ಉತ್ಪಾದನೆಯ ಉದ್ದೇಶದಿಂದ ಭಾಗಶಃ ಕಾರ್ಯಾರಂಭಕ್ಕೆ ಅವಕಾಶ ನೀಡುವುದಾಗಿ ತಮಿಳುನಾಡು ಸರಕಾರ ಸೋಮವಾರ ಹೇಳಿತ್ತು.