ದೇಶದಲ್ಲಿ 2 ಲಕ್ಷ ದಾಟಿದ ಕೋವಿಡ್ ಸಾವು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ.28: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಸಂಖ್ಯೆಯ ಅಂದರೆ 3,286 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ದೇಶದಲ್ಲಿ ಮಾರಕ ವೈರಸ್ಗೆ ಬಲಿಯಾದವರ ಒಟ್ಟು ಸಂಖ್ಯೆ ಎರಡು ಲಕ್ಷದ ಗಡಿದಾಟಿದೆ.
ದೇಶದಲ್ಲಿ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ದರ ಎರಡೂ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ದೇಶದಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಒಂದೇ ದಿನ ಮೂರು ಸಾವಿರಕ್ಕಿಂತಲೂ ಅಧಿಕ ಸಾವು ಸಂಭವಿಸಿದೆ. ದೇಶದಲ್ಲಿ ದಾಖಲಾಗಿರುವ 3,62,770 ಹೊಸ ಪ್ರಕರಣಗಳು ಮತ್ತು 3,286 ಸಾವು ಎರಡೂ ಇದುವರೆಗಿನ ಗರಿಷ್ಠ. ದೇಶದಲ್ಲಿ ಸತತ ಏಳನೇ ದಿನ 3 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ಮತ್ತು 2 ಸಾವಿರಕ್ಕಿಂತ ಅಧಿಕ ಸಾವು ದಾಖಲಾಗಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕದಲ್ಲಿ ಗರಿಷ್ಠ ಅಂದರೆ 5.72 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದರೆ, 3.92 ಲಕ್ಷ ಮಂದಿಯನ್ನು ಸೋಂಕಿಗೆ ಕಳೆದುಕೊಂಡಿರುವ ಬ್ರೆಝಿಲ್, 2.15 ಲಕ್ಷ ಮಂದಿ ಮೃತಪಟ್ಟಿರುವ ಮೆಕ್ಸಿಕೊ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಭಾರತ 2,01,106 ಕೋವಿಡ್ ಸಂಬಂಧಿ ಸಾವಿನೊಂದಿಗೆ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಬ್ರಿಟನ್, ಇಟಲಿ, ರಶ್ಯ ಮತ್ತು ಫ್ರಾನ್ಸ್ನಲ್ಲೂ ಒಂದು ಲಕ್ಷಕ್ಕಿಂತ ಅಧಿಕ ಮಂದಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಹಿಂದಿನ ಎಲ್ಲ ದಾಖಲೆಗಳಲ್ಲೂ ಮೀರಿಸಿದ ಮಂಗಳವಾರ, 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗಿನ ಗರಿಷ್ಠ ಸೋಂಕು ಪ್ರಕರಣಗಳು ವರದಿಯಾಗಿವೆ. ಕೇರಳ (32,819), ಪಶ್ಚಿಮ ಬಂಗಾಳ (16,403), ತಮಿಳುನಾಡು (15,830), ಗುಜರಾತ್ (14,352), ಹರ್ಯಾಣ (11,931), ತೆಲಂಗಾಣ (10,122), ಉತ್ತರಾಖಂಡ (5,703), ಜಮ್ಮು ಕಾಶ್ಮೀರ (3,164), ಹಿಮಾಚಲ ಪ್ರದೇಶ (2,157), ಪುದುಚೇರಿ (1,021) ಮತು ಛತ್ತೀಸ್ಗಢ (837) ಈ ರಾಜ್ಯಗಳು. 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ತಲಾ 10 ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರ 66,358 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ, ಕೇರಳ ಮತ್ತು ಕರ್ನಾಟಕ 30 ಸಾವಿರಕ್ಕೂ ಅಧಿಕ ಪ್ರಕರಣಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.