ಕೊಳ್ಳೇಗಾಲ ಉಪವಿಭಾಗ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೋವಿಡ್ ಗೆ ಬಲಿ

ಚಾಮರಾಜನಗರ, ಎ.28: ಕೊಳ್ಳೇಗಾಲ ಉಪವಿಭಾಗ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಜಿ.ಎನ್. ಗಣೇಶ್ ಕುಮಾರ್(59) ಕೊರೋನ ಸೋಂಕಿನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಮೂಲತಃ ಚಾಮರಾಜನಗರ ಪಟ್ಟಣದ ಮೇಗಲ ನಾಯಕರ ಬೀದಿಯ ನಿವಾಸಿಯಾಗಿದ್ದ ಇವರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದರು. ಇವರಿಗೆ ಎ.23ರಂದು ಕೊರೋನ ಸೋಂಕು ತಗಲಿರುವುದು ದೃಢಪಟ್ಟಿತ್ತು, ಇವರ ಪತ್ನಿಗೆ ಸೋಂಕು ತಗಲಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅವರ ನಿವಾಸದಲ್ಲಿ ಹೋಂ ಐಸೋಲೇಷನ್ ಆಗಿದ್ದರು. ಆದರೆ ಕಳೆದ ಸೋಮವಾರ ಡಾ.ಜಿ.ಎನ್. ಗಣೇಶ್ ಕುಮಾರ್ ರ ಆರೋಗ್ಯ ಪರಿಸ್ಥಿತಿ ವಿಷಮಿಸಿದ್ದರಿಂದ ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story





