ವಿಶಾಖಪಟ್ಟಣ :ಚಿಕಿತ್ಸೆಗಾಗಿ ಕಾದು ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ಮಗು
ಕೋವಿಡ್ ನಿಂದ ಮತ್ತೊಂದು ದುರಂತ

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಲು ಬಹಳಷ್ಟು ಸಮಯ ಕಾದಿದ್ದ ಶಿಶುವೊಂದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ.
ಶಿಶು ಕೋವಿಡ್-19ನಿಂದ ಬಳಲುತ್ತಿದ್ದು, ಉಸಿರಾಡಲು ಕಷ್ಟಪಡುತ್ತಿತ್ತು. ಮಗುವಿಗೆ ಚಿಕಿತ್ಸೆ ನೀಡುವಂತೆ ಪೋಷಕರು ಸುಮಾರು ಒಂದು ಗಂಟೆಕಾಲ ಬೇಡಿಕೊಂಡರು. ಅಂತಿಮವಾಗಿ ಮಗುವನ್ನು ಚಿಕಿತ್ಸೆಗಾಗಿ ಸೇರಿಸಿಕೊಳ್ಳಲಾಗಿತ್ತು. ತೀರಾ ವಿಳಂಬವಾಗಿದ್ದ ಕಾರಣ ಮಗು ಮೃತಪಟ್ಟಿದೆ.
ಮಗು ಮೃತಪಟ್ಟ ಬಳಿಕ ಕೋಪಗೊಂಡ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಸಿಬ್ಬಂದಿಯೊಬ್ಬರು ಜಗಳವಾಡಿದರು.
ವಿಶಾಖಪಟ್ಟಣದ ಅತಿ ದೊಡ್ಡ ಕಿಂಗ್ ಜಾರ್ಜ್ ಆಸ್ಪತ್ರೆಯ ಹೊರಗೆ ಒಂದೂವರೆ ವರ್ಷದ ಹೆಣ್ಣುಮಗು ಸರಿತಾ ಆ್ಯಂಬುಲೆನ್ಸ್ ನಲ್ಲಿ ಉಸಿರಾಡಲು ಕಷ್ಟಪಡುತ್ತಿತ್ತು. ಮಗುವಿನ ಪೋಷಕರು ಚಿಕಿತ್ಸೆಗಾಗಿ ಕಾದು ಕಾದು ಸುಸ್ತಾಗಿದ್ದರು.
ವೀಡಿಯೊದಲ್ಲಿ ಬಾಲಕಿಯ ತಂದೆ ವೀರಾ ಬಾಬು ಅವರು ಆಂಬುಬ್ಯಾಗ್ ಬಳಸಿ ಮಗುವಿಗೆ ಆಮ್ಲಜನಕ ಪಂಪ್ ಮಾಡುತ್ತಿರುವುದು, ಬಾಲಕಿಯ ತಾಯಿ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವುದು ಕಂಡುಬಂದಿದೆ.
“ದಯವಿಟ್ಟು ನನ್ನ ಮಗುವನ್ನು ಉಳಿಸಿ, ಯಾರಾದರೂ ದಯವಿಟ್ಟು ನನ್ನ ಮಗುವನ್ನು ಉಳಿಸಿ. ಅವರು ರಸ್ತೆಯಲ್ಲಿಯೇ ಬಿಟ್ಟು ಹೋದರು. ಇದಕ್ಕಾಗಿ ಅವರು ವೈದ್ಯರಾಗಿದ್ದೀರಾ?ಮಗುವನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದೆ. ಆದರೆ ಅವರು ರಸ್ತೆಯಲ್ಲಿಯೇ ಬಿಟ್ಟುಹೋದರು. ಅವರು 104 ಸಂಖ್ಯೆಗೆ ಫೋನ್ ಕರೆ ಮಾಡಲು ಹೇಳಿದರು. ಅಲ್ಲಿ ಯಾರೂ ಉತ್ತರಿಸುವವರು ಇರಲಿಲ’’್ಲ ಎಂದು ಮಗುವಿನ ತಾಯಿ ಕಣ್ಣೀರಿಟ್ಟಿರು.
ಮಗುವಿನ ತಾಯಿಯ ಹತಾಶೆಯು ಭಾರತದ ಕೋವಿಡ್ ಸ್ಫೋಟದಿಂದಾಗಿರುವ ಅಪಾರ ಮಾನವ ದುರಂತವನ್ನು ಪ್ರತಿಬಿಂಬಿಸಿದೆ. ಕೊರೋನ ಎರಡನೇ ಅಲೆಯಿಂದಾಗಿ ದೇಶಾದ್ಯಂತ ಆಸ್ಪತ್ರೆಗಳು ಹಾಗೂ ಸೌಲಭ್ಯಗಳಲ್ಲಿ ಕೊರತೆ ಕಾಡುತ್ತಿದೆ.
ನಿನ್ನೆ ಮಗುವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಬಾಲಕಿ ಆರೋಗ್ಯ ಹದಗೆಟ್ಟಿತ್ತು. ತುರ್ತು ಚಿಕಿತ್ಸೆಗಾಗಿ ಬಾಲಕಿಯ ಹೆತ್ತವರು 90 ನಿಮಿಷ ಕಾದಿದ್ದರು. ಆದರೆ ಮಗು ಆಸ್ಪತ್ರೆಯ ಬಾಗಿಲಲ್ಲಿ ಪ್ರಾಣಬಿಟ್ಟಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.