ತೆಲಂಗಾಣ ಸ್ಥಳೀಯ ಸಂಸ್ಥೆ ಚುನಾವಣೆ: ಭಾರೀ ರ್ಯಾಲಿ ನಡೆಸಿ ಟೀಕೆಗೆ ಗುರಿಯಾದ ಬಿಜೆಪಿ

photo:BJP telangana
ಹೊಸದಿಲ್ಲಿ: ಕೋವಿಡ್ನ ಭಯಾನಕ ಎರಡನೇ ಅಲೆಯು ಬೃಹತ್ ಚುನಾವಣಾ ರ್ಯಾಲಿಗಳ ಉತ್ಸಾಹವನ್ನು ಕುಂದಿಸಿಲ್ಲ. ತೆಲಂಗಾಣದಲ್ಲಿ ಏಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ಕೊನೆಯ ದಿನದಂದು ಬಿಜೆಪಿ ಭಾರೀ ಜನದಟ್ಟಣೆಯ ರ್ಯಾಲಿಗಳ ಫೋಟೋಗಳನ್ನು ಟ್ವೀಟ್ ಮಾಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಟೀಕೆ ಕೇಳಿಬಂದ ನಂತರ ಪೋಸ್ಟ್ ಅನ್ನು ಅಳಿಸಲಾಗಿದೆ.
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಕೂಡ ಕೋವಿಡ್ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ನಡೆಸುತ್ತಿವೆ.
ಡಿಸೆಂಬರ್ನಲ್ಲಿ ನಡೆದ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಹೆಚ್ಚು ಪ್ರಚಾರ ಮಾಡಿ ಟೀಕೆಗೆ ಗುರಿಯಾಗಿತ್ತು. ಆಗ ಅಮಿತ್ ಶಾ, ಜೆ.ಪಿ. ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಹಲವಾರು ಪಕ್ಷದ ಮುಖಂಡರು ಬೃಹತ್ ರೋಡ್ ಶೋ ನಡೆಸಿದ್ದರು. ಆದರೆ ಈ ಬಾರಿ ಎಪ್ರಿಲ್ 30 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಮತ್ತೊಂದು ಬೃಹತ್ ಅಭಿಯಾನದೊಂದಿಗೆ ಸುದ್ದಿ ಮಾಡಿದೆ.
ವಾರಂಗಲ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ಪಕ್ಷದ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ನೇತೃತ್ವದಲ್ಲಿ ಬಿಜೆಪಿ ಪ್ರಚಾರ ಅಭಿಯಾನವನ್ನು ನಡೆಸಿತ್ತು. ಬಿಜೆಪಿ ಧ್ವಜವು "ವಾರಂಗಲ್ನಲ್ಲಿ ಎತ್ತರಕ್ಕೆ ಹಾರಬೇಕು" ಎಂದು ಸಾರ್ವಜನಿಕ ಸಭೆಯಲ್ಲಿ ಸಂಜಯ್ ಘೋಷಿಸಿದ್ದರು.
ಕೇಂದ್ರ ಗೃಹ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ವಾರಂಗಲ್ ಹಾಗೂ ಖಮ್ಮಂನಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಮುಖ್ಯಮಂತ್ರಿ ಆರೋಗ್ಯ ರಕ್ಷಣೆಯನ್ನು ನಿರ್ಲಕ್ಷಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ವಾರಂಗಲ್ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆಮ್ಲಜನಕ ಘಟಕ ಸ್ಥಾಪನೆಗೆ ಅನುಮೋದಿಸಿದ್ದಾರೆ ಎಂದು ತಿಳಿಸಿದರು.
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪ್ರಚಾರದಲ್ಲಿ ಹಿಂದುಳಿಯಲಿಲ್ಲ. ಮಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹಾಗೂ ಅವರ ಮಗ, ಪೌರಾಡಳಿತ ಸಚಿವ ಕೆ.ಟಿ. ರಾವ್ ಕೋವಿಡ್ ಸೋಂಕಿಗೆ ಒಳಗಾಗಿದ್ದರೂ ಇತರ ಸಚಿವರು ಖಮ್ಮಮ್ ಹಾಗೂ ಇತರೆಡೆ ಪಕ್ಷದ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ನಾಗಾರ್ಜುನ ಸಾಗರ ವಿಧಾನಸಭೆಯ ಉಪ ಚುನಾವಣೆ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಮರುದಿನವೇ ಕೆ.ಸಿ. ಚಂದ್ರಶೇಖರ್ ಗೆ ಕೋವಿಡ್ ಸೋಂಕು ತಗಲಿತ್ತು. ಸಭೆಯಲ್ಲಿ ಭಾಗವಹಿಸಿದ್ದ 60ಕ್ಕೂಅಧಿಕ ರಾಜಕೀಯ ನಾಯಕರಿಗೆ ಸೋಂಕು ತಗಲಿತ್ತು.